ಮುಳ್ಳೇರಿಯ: ವನ್ಯಜೀವಿಗಳ ದಾಳಿಗಳಿಂದ ರಕ್ಷಣೆಗಾಗಿ ತ್ರಿಸ್ಥರ ಹಂತದ ಪಂಚಾಯತಿಗಳ ಸಹಾಯದಿಂದ ಕಾರಡ್ಕ ಬ್ಲಾಕ್ ಪಂಚಾಯತಿ ನಿರ್ಮಿಸಿರುವ ಸೌರ ವಿದ್ಯುತ್ ಬೇಲಿ ರಾಜ್ಯದಲ್ಲಿ ಮಾದರಿ ಯೋಜನೆಯಾಗಿದೆ. ಈ ಪ್ರದೇಶದಲ್ಲಿ ವನ್ಯಜೀವಿಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಲು ಪುಲಿಪರಂಬದಲ್ಲಿ ನಿರ್ಮಿಸಲಾದ ಕಾವಲು ಗೋಪುರ ಉದ್ಘಾಟನೆಗೆ ಸಿದ್ಧವಾಗಿದೆ. ಯೋಜನೆಯ ವೆಚ್ಚ 3.3 ಕೋಟಿ ರೂ. ಇದರಲ್ಲಿ 1.20 ಕೋಟಿ ರೂ.ಗಳನ್ನು ತ್ರಿಸ್ಥರ ಪಂಚಾಯತಿಗಳು ಯೋಜನೆಗಾಗಿ ಹಸ್ತಾಂತರಿಸಿವೆ.
ಅರಣ್ಯ ಗಡಿಗೆ ಹೊಂದಿಕೊಂಡಿರುವ ಕಾರಡ್ಕ ಬ್ಲಾಕ್ ಪಂಚಾಯತಿ ವ್ಯಾಪ್ತಿಯ ದೇಲಂಪಾಡಿ, ಕಾರಡ್ಕ, ಮುಳಿಯಾರ್, ಕುತ್ತಿಕೋಲ್ ಮತ್ತು ಬೇಡಡ್ಕ ಗ್ರಾಮ ಪಂಚಾಯತಿಗಳಲ್ಲಿ ಅಳವಡಿಸಲಾದ ಸೌರ ತೂಗು ಬೇಲಿಯು ರಾಜ್ಯದಲ್ಲೇ ಕಾಡಾನೆಗಳ ಉಪಟಳಕ್ಕೆ ಶಾಶ್ವತ ಪರಿಹಾರವನ್ನು ಒದಗಿಸಿದೆ. ಸೌರ ತೂಗು ಬೇಲಿಯನ್ನು ಇನ್ನೂ ಎಂಟು ಕಿಲೋಮೀಟರ್ ವಿಸ್ತರಿಸಲು ತ್ರಿಸ್ಥರ ಪಂಚಾಯತಿಗಳು ಹೆಚ್ಚುವರಿಯಾಗಿ 50 ಲಕ್ಷ ರೂ.ಗಳನ್ನು ಹಂಚಿಕೆ ಮಾಡಿದೆ.
ಕಾಡಾನೆ ದಾಳಿಯಿಂದ ಗಡಿ ಗ್ರಾಮದಲ್ಲಿ ಬೆಳೆಗಳಿಗೆ ಕೋಟ್ಯಂತರ ರೂ. ಹಾನಿಯಾಗಿದೆ. ಅನೇಕ ಜನರು ತಮ್ಮ ಮನೆಗಳನ್ನು ತೊರೆಯುವ ಒತ್ತಡದಲ್ಲಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರದ ಅಗತ್ಯ. ಈ ನಿಟ್ಟಿನಲ್ಲಿ ಕಾರಡ್ಕ ಬ್ಲಾಕ್ ಪಂಚಾಯತಿ ಸೋಲಾರ್ ತೂಗು ಬೇಲಿಯ ಕಲ್ಪನೆಗೆ ಕಾರಣವಾಗಿದೆ.
ಬ್ಲಾಕ್ ಪಂಚಾಯತಿ, ಗ್ರಾಮ ಪಂಚಾಯತಿಗಳು, ಅರಣ್ಯ ಇಲಾಖೆ ಮತ್ತು ಸ್ಥಳೀಯರ ಜಂಟಿ ಪ್ರಯತ್ನದ ಪರಿಣಾಮವಾಗಿ, ಅರಣ್ಯ ಇಲಾಖೆಯ ಬೆಂಬಲದೊಂದಿಗೆ ಈ ಯೋಜನೆ ಜಾರಿಯಾಯಿತು. ಅರಣ್ಯ ಇಲಾಖೆಯ ಸಹಯೋಗದೊಂದಿಗೆ ತ್ರಿಸ್ಥರ ಪಂಚಾಯತಿಗಳು ಜಾರಿಗೆ ತಂದಿರುವ ರಾಜ್ಯದ ಮೊದಲ ಅರಣ್ಯ ಆನೆ ರಕ್ಷಣಾ ಯೋಜನೆಯೂ ಇದಾಗಿದೆ. ಮಾದರಿ ಯೋಜನೆಯಾಗಿ 60 ಲಕ್ಷ ರೂ.ಗಳ ಪ್ರೋತ್ಸಾಹ ಧನವನ್ನು ಸಹ ಮಂಜೂರು ಮಾಡಲಾಗಿದೆ.
ಕರ್ನಾಟಕ ಮಂಡೆಕೋಲಿನ ಗಡಿಯಲ್ಲಿರುವ ತಲ್ಪಚ್ಚೇರಿಯಿಂದ ಪುಲಿಪರಂಬವರೆಗಿನ 29 ಕಿ.ಮೀ. ವ್ಯಾಪ್ತಿಯಲ್ಲಿ ನೇತಾಡುವ ಬೇಲಿಯನ್ನು ಜಾರಿಗೆ ತರಲು ನಿರ್ಧರಿಸಲಾಯಿತು. ಮೊದಲ ಹಂತವನ್ನು ಚಾಮಕೊಚ್ಚಿಯಿಂದ ವಳ್ಳಕಾನವರೆಗಿನ ಎಂಟು ಕಿ.ಮೀ. ವ್ಯಾಪ್ತಿಯಲ್ಲಿ ಸ್ಥಾಪಿಸಲಾಯಿತು.
ರಾಜ್ಯದ ವಿವಿಧ ಭಾಗಗಳಲ್ಲಿ ರಕ್ಷಣಾತ್ಮಕ ಗೋಡೆಗಳನ್ನು ನಿರ್ಮಿಸುವಲ್ಲಿ ಪರಿಣತಿಯನ್ನು ಹೊಂದಿರುವ ಕೇರಳ ಪೋಲೀಸ್ ವಸತಿ ಮತ್ತು ನಿರ್ಮಾಣ ನಿಗಮವು ನಿರ್ಮಾಣದ ಜವಾಬ್ದಾರಿಯನ್ನು ಹೊಂದಿತ್ತು. ಎರಡೂವರೆ ಮೀಟರ್ ಎತ್ತರದಲ್ಲಿ ಕಬ್ಬಿಣದ ಕಂಬಗಳನ್ನು ನೆಡಲಾಗುತ್ತದೆ ಮತ್ತು ಲಂಬವಾಗಿ ಒಂದು ರೇಖೆಯನ್ನು ಎಳೆಯಲಾಗುವುದು. ಬೇಲಿಯ ಮಾದರಿಯು ಈ ಸಾಲಿನಿಂದ ಕೆಳಗೆ ನೇತಾಡುವ 'ಅಲಸಂಡೆ ಬಳ್ಳಿ'ಗಳಂತಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ, ಕ್ಯಾಂಪ್ ಶೆಡ್ ಮತ್ತು ಪತ್ತೆ ಗೋಪುರ ಪೂರ್ಣಗೊಂಡಿದೆ. ಕಳೆದ ಎರಡು ವರ್ಷಗಳಿಂದ ಸೋಲಾರ್ ಬೇಲಿ ಇರುವ ಪ್ರದೇಶಗಳಲ್ಲಿ ಆನೆ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸಲಾಗಿದೆ ಎಂದು ರೈತರು ಹೇಳುತ್ತಾರೆ. ನೇತಾಡುವ ಬೇಲಿಯ ನಿರ್ವಹಣೆ ಮತ್ತು ಮೇಲ್ವಿಚಾರಣೆ ಮತ್ತು ಗಿಡಗಂಟಿಗಳನ್ನು ಕತ್ತರಿಸಲು ಎಂಟು ತಾತ್ಕಾಲಿಕ ವೀಕ್ಷಕರು ಸಹ ಇದ್ದಾರೆ.
ಕಳೆದ 15 ವರ್ಷಗಳಿಂದ, ಮುಳಿಯಾರ್, ಕುತ್ತಿಕೋಲ್, ದೇಲಂಪಾಡಿ ಮತ್ತು ಕಾರಡ್ಕ ಗ್ರಾಮ ಪಂಚಾಯತಿಗಳಲ್ಲಿ ಕಾಡು ಆನೆಗಳ ಸಮಸ್ಯೆ ವ್ಯಾಪಕವಾಗಿ ಹರಡಿದೆ. ಕಾಡು ಮತ್ತು ಕೃಷಿಭೂಮಿ ಹತ್ತಿರವಿರುವ ಈ ಪ್ರದೇಶದಲ್ಲಿ, ಕಾಡಾನೆಗಳು ಕೃಷಿ ಭೂಮಿಗೆ ನುಗ್ಗಿ ಬೆಳೆಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಿವೆ. ಕಾರಡ್ಕ ಆನೆ ಸಂರಕ್ಷಣಾ ಯೋಜನೆಯನ್ನು 2021 ರಲ್ಲಿ ಪ್ರಾರಂಭಿಸಲಾಯಿತು ಮತ್ತು 2023 ರ ವೇಳೆಗೆ ಪೂರ್ಣಗೊಂಡಿತು. ಪಂಚಾಯತಿ ಮತ್ತು ಅರಣ್ಯ ಸಂರಕ್ಷಣಾ ಸಮಿತಿಯ ಸಹಾಯದಿಂದ ಈ ಬೇಲಿಗಳನ್ನು ಬಹಳ ಪರಿಣಾಮಕಾರಿಯಾಗಿ ರಕ್ಷಿಸಲಾಗುತ್ತಿದೆ, ಆದ್ದರಿಂದ ಈ ಪಂಚಾಯತಿಗಳಲ್ಲಿ ಪ್ರಸ್ತುತ ಕಾಡಾನೆ ಸಮಸ್ಯೆ ಇಲ್ಲ. ಮುಳಿಯಾರ್, ಕಾರಡ್ಕ, ದೇಲಂಪಾಡಿ, ಕುತ್ತಿಕೋಲ್ ಮತ್ತು ಬೇಡಡ್ಕ ಪಂಚಾಯತಿಗಳಲ್ಲಿ ವ್ಯಾಪಕವಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸುಮಾರು ಇಪ್ಪತ್ತೆರಡು ಕಾಡಾನೆಗಳನ್ನು ಬೇಲಿಯ ಹೊರಗೆ ಒಳಬಾರದಂತೆ ತಡೆಯಲು ಸಾಧ್ಯವಾಗಿದೆ ಎಂದು ವಿಭಾಗೀಯ ಅರಣ್ಯ ಅಧಿಕಾರಿ ಕೆ. ಅಶ್ರಫ್ ಹೇಳಿರುವರು.




