ತಿರುವನಂತಪುರಂ: ರಾಜ್ಯದಲ್ಲಿ ಬೀದಿ ನಾಯಿಗಳ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ತುರ್ತು ಉಪಕ್ರಮಗಳನ್ನು ಕೊನೆಗೂ ಕೈಗೊಂಡಿದೆ. ಬೀದಿ ನಾಯಿಗಳ ಸಮಸ್ಯೆಯನ್ನು ಪರಿಹರಿಸಲು ಸ್ಥಳೀಯಾಡಳಿತ ಇಲಾಖೆಯು ಇನ್ನೂ 152 ಎಬಿಸಿ ಕೇಂದ್ರಗಳನ್ನು ಪ್ರಾರಂಭಿಸಲಿದೆ ಎಂದು ಸಚಿವ ಎಂ.ಬಿ. ರಾಜೇಶ್ ಹೇಳಿರುವರು.
ಸ್ಥಳೀಯಾಡಳಿತ ಸಂಸ್ಥೆಗಳು ಎರಡು ತಿಂಗಳೊಳಗೆ ಇದಕ್ಕಾಗಿ ಸ್ಥಳವನ್ನು ಕಂಡುಕೊಳ್ಳಬೇಕು. ಲಸಿಕೆ ಕ್ರಮಗಳನ್ನು ಪರಿಣಾಮಕಾರಿಯಾಗಿಸಲಾಗುವುದು. ರೋಗಪೀಡಿತ ಬೀದಿ ನಾಯಿಗಳನ್ನು ದಯಾಮರಣಗೊಳಿಸಲಾಗುವುದು.
ಎಬಿಸಿ ನಿಯಮಗಳಲ್ಲಿ ಸಡಿಲಿಕೆಗಾಗಿ ಮತ್ತೆ ಕೇಂದ್ರವನ್ನು ಸಂಪರ್ಕಿಸುವುದಾಗಿ ಸಚಿವ ಎಂ.ಬಿ. ರಾಜೇಶ್ ಹೇಳಿದರು.
ಬೀದಿ ನಾಯಿಗಳ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಭೆ ನಡೆಯಿತು.
ಈ ಸಭೆಯ ಪ್ರಮುಖ ನಿರ್ಧಾರವೆಂದರೆ, ಸೋಂಕಿತ ನಾಯಿಗಳನ್ನು ಗುರುತಿಸಲು ಮತ್ತು ದಯಾಮರಣ ಮಾಡಲು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಅನುಮತಿ ನೀಡಲು ನಿರ್ಧರಿಸಲಾಗಿದೆ.
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಪ್ರಕಾರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಈ ಅನುಮತಿಯನ್ನು ನೀಡಲಾಗುವುದು.
ನಾಯಿಗಳು ಸೋಂಕಿಗೆ ಒಳಗಾಗಿವೆ ಎಂದು ಪಶುವೈದ್ಯ ತಜ್ಞರು ಪ್ರಮಾಣೀಕರಿಸಿದ ನಂತರ, ಅವುಗಳನ್ನು ದಯಾಮರಣಗೊಳಿಸಬಹುದು. ಈ ನಿಟ್ಟಿನಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸೂಚನೆಗಳನ್ನು ನೀಡಲು ಸಹ ನಿರ್ಧರಿಸಲಾಗಿದೆ.






