ಬೆಂಗಳೂರು: ಕೋಲಾರ ಪತ್ರಿಕಾ ಭವನದಲ್ಲಿ ಕನ್ನಡ ಭವನ ಕಾಸರಗೋಡು ಮತ್ತು ಮೇಘ ಮೈತ್ರಿ ಸಾಹಿತ್ಯ ಸಂಘ ಬಾಗಲಕೋಟೆ, ಕಮತಗಿ ಸಂಯುಕ್ತ ಆಶ್ರಯದಲ್ಲಿ ಗಡಿನಾಡು ಸಾಹಿತ್ಯ ಸಮ್ಮೇಳನ ಶನಿವಾರ ನಡೆಯಿತು.
ಕರ್ನಾಟಕ ಸರ್ಕಾರದ ಗಡಿ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಡಾ. ಸಿ ಸೋಮಶೇಖರ್ ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿದರು. ಗಡಿನಾಡು ಪ್ರದೇಶಗಳಲ್ಲಿ ಮಾತ್ರವಲ್ಲದೆ ಒಳನಾಡಿನಲ್ಲೂ ಕನ್ನಡಕ್ಕೆ, ಕನ್ನಡ ಶಾಲೆಗಳಿಗೆ, ಕನ್ನಡ ಸಾಹಿತ್ಯ ಕ್ಷೇತ್ರಗಳಲ್ಲಿಯೂ ಆತಂಕ ಹುಟ್ಟುವ ರೀತಿಯಲ್ಲಿ ಹಿನ್ನಡೆ ಕಾಣುತ್ತಿದೆ, ಕನ್ನಡ, ಕನ್ನಡ ಸಾಹಿತ್ಯ, ಸಂಸ್ಕೃತಿ ಪ್ರೀತಿಸುವ ಮನಸ್ಸುಗಳ ಒಗ್ಗೂಡುವಿಕೆಯಿಂದ ನಡೆಯುವ ಇಂತಹ ಕಾರ್ಯಕ್ರಮಗಳು ಅಲ್ಪ ಭರವಸೆ ಮೂಡಿಸುತ್ತಿದೆ. ಇಂತಹ ಕನ್ನಡ ಪ್ರೀತಿಯ ನಿಸ್ವಾರ್ಥ ಸಂಘಟಕರು, ಸಾಹಿತ್ಯ ಪ್ರೇಮಿಗಳು ಒಂದಾಗಬೇಕು, ಇಂತವರಿಂದ ಕನ್ನಡ ರಕ್ಷಿಸಲ್ಪಡುತ್ತಿದೆ ಎಂದರು.
ಈ ಸಾಹಿತ್ಯ ಸಮ್ಮೇಳನದಲ್ಲಿ ಡಾ. ವಾಮನ್ ರಾವ್ ಬೇಕಲ್, ರಮೇಶ್ ಕಮತಗಿ, ಬಿ. ಶಿವಕುಮಾರ್ ಕೋಲಾರ ಮೊದಲಾದ ಕನ್ನಡ ಮುಖಂಡರು ಮುಂಬರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆಗೆ ಡಾ. ಸಿ ಸೋಮಶೇಖರ್ ಅವರಿಗೆ ಸ್ಪರ್ಧೆಯಲ್ಲಿ ಕಣಕ್ಕಿಳಿಯಲು ಆಹ್ವಾನಿಸಿದರು. ಅಭಿಮಾನಿಗಳ ಅಪೇಕ್ಷಯನ್ನು ಸ್ವೀಕರಿಸಿದ ಡಾ. ಸಿ. ಸೋಮಶೇಖರ್ ಅಭ್ಯರ್ಥಿಯಾಗುವ ತೀರ್ಮಾನ ಪ್ರಕಟಿಸಿದ್ದು ಸಮ್ಮೇಳನದಲ್ಲಿ ಹೊಸ ಹುರುಪು ಮೂಡಿಸಿತು.ಡಾ. ಸಿ ಸೋಮಶೇಖರ್ ಅವರಿಗೆ ಸಂಪೂರ್ಣ ಬೆಂಬಲ ಸೂಚಿಸಿ ಗಣ್ಯ ವ್ಯಕ್ತಿಗಳೆಲ್ಲರೂ ಮಾತನಾಡಿದರು. ಅ. ನ. ಕೃ. ಹಾಗೂ ಡಾ. ರಾಜಕುಮಾರ್ ಪುತ್ಥಳಿಗೆ ಹಾರಾರ್ಪಣೆ ಮಾಡಿ ಕನ್ನಡ ಧ್ವಜಾರೋಹಣೆ ಮಾಡಿ, ಕನ್ನಡ ಧ್ವಜಮಯ ಮೆರವಣಿಗೆ, ಪುಸ್ತಕ ಮಳಿಗೆಗಳನ್ನು ವಿವಿಧ ಗಣ್ಯರು ಉದ್ಘಾಟಿಸಿದರು. ಅಪಾರ ಜನರು ಅನೇಕ ಕನ್ನಡ ಗಣ್ಯರು ಭಾಗವಹಿದ್ದರು.
ಈ ಸಂದರ್ಭ ಸುಮಾರು 100ಕ್ಕೂ ಮಿಕ್ಕಿದ ವಿವಿಧ ಕನ್ನಡ ಕ್ಷೇತ್ರಗಳ ಗಣ್ಯರನ್ನು, ಪ್ರಶಸ್ಥಿ, ಗೌರವಾರ್ಪಣೆ, ಅಭಿನಂದನೆ, ಸನ್ಮಾನ, ನಡೆದವು. ಭಾಗವಹಿಸಿದ ಕವಿಗಳನ್ನು ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು. ಕಾಸರಗೋಡು ಕನ್ನಡ ಭವನ ಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್ -ಸಂಧ್ಯಾ ರಾಣಿ ಟೀಚರ್, ಮೇಘಮೈತ್ರಿ ಸಾಹಿತ್ಯ ಸಂಘ ಬಾಗಲಕೋಟ ಅಧ್ಯಕ್ಷ ರಮೇಶ್ ಕಮತಗಿ, ಸ್ವರ್ಣಭೂಮಿ ಫೌಂಡೇಶನ್ ಕೋಲಾರ ಅಧ್ಯಕ್ಷರಾದ ಬಿ. ಶಿವಕುಮಾರ್ ನೇತೃತ್ವ ವಹಿಸಿದ್ದರು.

