ಕಾಸರಗೋಡು: ಕೇರಳದ ಉನ್ನತ ಶಿಕ್ಷಣ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಕ್ರಾಂತಿಕಾರಿ ಬದಲಾವಣೆ ಕಂಡುಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಿರುವುದಾಗಿ ರಾಜ್ಯ ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಖಾತೆ ಸಚಿವೆ ಡಾ. ಆರ್. ಬಿಂದು ಹೇಳಿದ್ದಾರೆ.
ಅವರು ಕೇರಳ ಸರ್ಕಾರದ ಯೋಜನಾ ನಿಧಿಯ ಆರ್ಥಿಕ ನೆರವಿನೊಂದಿಗೆ, ಎಳೇರಿತಟ್ಟು ಇ. ಕೆ. ನಾಯನಾರ್ ಸ್ಮಾರಕ ಸರ್ಕಾರಿ ಕಾಲೇಜಿನ ಕ್ಯಾಂಪಸ್‍ನಲ್ಲಿ ಹೊಸದಾಗಿ ನಿರ್ಮಿಸಲಾದ ಅರ್ಥಶಾಸ್ತ್ರ ಶೈಕ್ಷಣಿಕ ಬ್ಲಾಕ್, ಕ್ಯಾಂಪಸ್ ರಸ್ತೆ, ನೀರಿನ ಟ್ಯಾಂಕ್, ಎನ್‍ಎಸ್‍ಎಸ್ ಕೊಠಡಿ, ಐಕ್ಯೂಎಸಿ ಕೊಠಡಿ ಮತ್ತು ವೈದ್ಯಕೀಯ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕೇರಳವು ದ. ಭಾರತದಲ್ಲೇ ಅತ್ಯುತ್ತಮ ಪ್ರಯೋಗಾಲಯ ಸಂಕೀರ್ಣ ಹೊಂದಿದ್ದು, ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿಪರ ಯೋಜನಾ ಕೋಶಗಳನ್ನು ಪ್ರಾರಂಭಿಸಲಾಗುವುದು ಎಂದು ಸಚಿವರು ಹೇಳಿದರು. ಕಳೆದ ನಾಲ್ಕು ವರ್ಷಗಳಲ್ಲಿ ಕೇರಳದ ಕಾಲೇಜುಗಳಲ್ಲಿ 6000 ಕೋಟಿ ರೂ.ಗಳ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ. ಇದರ ಭಾಗವಾಗಿ ಸ್ಮಾರ್ಟ್ ತರಗತಿ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಜತೆಗೆ ಶೈಕ್ಷಣಿಕ ಬ್ಲಾಕ್‍ಗಳು, ಆಧುನಿಕ ಗ್ರಂಥಾಲಯ, ವಿಶಾಲವಾದ ಸಭಾಂಗಣ ಮತ್ತು ಕ್ಯಾಂಪಸ್ ರಸ್ತೆಗಳನ್ನು ಸ್ಥಾಪಿಸಲು ಸಾಧ್ಯವಾಗಿದೆ ಎಂದು ಸಚಿವರು ಹೇಳಿದರು.
ಶಾಸಕ ಎಂ.ರಾಜಗೋಪಾಲನ್ ಶಾಸಕ ಅಧ್ಯಕ್ಷತೆ ವಹಿಸಿದ್ದರು. ಲೋಕೋಪಯೋಗಿ ಕಟ್ಟಡ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುನಿಲ್ ಕುಮಾರ್ ಎ. ವರದಿ ಮಂಡಿಸಿದರು. ವೆಸ್ಟ್ ಎಳೇರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಿರಿಜಾ ಮೋಹನನ್, ಉಪಾಧ್ಯಕ್ಷ ಪಿ.ಸಿ.ಇಸ್ಮಾಯಿಲ್, ಪರಪ್ಪ ಬ್ಲಾಕ್ ಪಂಚಾಯಿತಿ ಸದಸ್ಯ ಎ.ವಿ. ರಾಜೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಬಿಂದು ಮುರಳೀಧರನ್, ಶಾಂತಿಕೃಪಾ, ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಪ್ರತಿನಿಧಿ ಸ್ಕರಿಯಾ ಅಬ್ರಹಾಂ, ಪಿಟಿಎ ಉಪಾಧ್ಯಕ್ಷ ಟಿ.ಜಿ. ಶಸೀಂದ್ರನ್, ಉಪ ಪ್ರಾಂಶುಪಾಲ ಡಾ.ಟೋಬಿ ಜೋಸೆಫ್ ಮ್ಯಾಥ್ಯೂ ಕೆ.ಕೆ., ಐಕ್ಯೂಎಸಿ ಸಂಯೋಜಕ ಪಿ.ಜೆ.ಪ್ರಸಾದ್, ಕಾಲೇಜು ಯೂನಿಯನ್ ಅಧ್ಯಕ್ಷೆ ಅಂಜನಾ ಪದ್ಮನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಮ್ಯಾಥ್ಯೂಸ್ ಪ್ಲಾಮುಟ್ಟಿಲ್ ಸ್ವಾಗತಿಸಿ, ಎಫ್.ವೈ.ಯು.ಜಿ.ಪಿ ಸಂಯೋಜಕ ಡಾ. ಪಿ.ಸಿ. ಅಶ್ರಫ್ ವಂದಿಸಿದರು.





