ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಎಲ್ಲ ಆರೋಪಿಗಳ ವಿರುದ್ಧವೂ ಹಣ ಅಕ್ರಮ ವರ್ಗಾವಣೆಯ ಆರೋಪ ಹೊರಿಸಲಾಗಿದೆ. ಖಂಡಿತವಾಗಿಯೂ ಹಣ ಅಕ್ರಮ ವರ್ಗಾವಣೆಯಾಗಿರುವ ಪ್ರಕರಣ ಇದಾಗಿದೆ ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಗುರುವಾರ ದೆಹಲಿ ನ್ಯಾಯಾಲಯದಲ್ಲಿ ವಾದಿಸಿದೆ.
ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಮುಂದೆ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು, 'ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಯಂಗ್ ಇಂಡಿಯನ್ ಕಂಪನಿಯ 'ಲಾಭ ಪಡೆಯುವ ಹಕ್ಕು ಹೊಂದಿರುವ ಮಾಲೀಕರು' ಆಗಿದ್ದಾರೆ. ಷೇರುದಾರರ ಮರಣದ ನಂತರ ಅವರು ಕಂಪನಿಯ ಮೇಲೆ ಶೇ 100ರಷ್ಟು ನಿಯಂತ್ರಣ ಪಡೆದುಕೊಂಡರು' ಎಂದು ಹೇಳಿದ್ದಾರೆ.
ಯಂಗ್ ಇಂಡಿಯನ್ ಕಂಪನಿಯ ಎಲ್ಲ ವ್ಯವಹಾರಗಳಿಗೆ ಗಾಂಧಿ ಕುಟುಂಬ ಜವಾಬ್ದಾರರಾಗಿದ್ದು, ಅವರ ಒಪ್ಪಿಗೆಯಿಲ್ಲದೆ 'ಹಣ ಅಕ್ರಮ ವರ್ಗಾವಣೆ' ನಡೆಸಲು ಸಾಧ್ಯವಿಲ್ಲ ಎಂದು ವಾದ ಮಂಡಿಸಿದರು. ಈ ಪ್ರಕರಣದ ವಿಚಾರಣೆ ಗುರುವಾರವೂ ಮುಂದುವರಿಯಲಿದೆ.




