ಮಂಜೇಶ್ವರ :ಭಾರತೀಯ ಕಿಸಾನ್ ಸಂಘದ ಕಾಸರಗೋಡು ಜಿಲ್ಲಾಸಮಿತಿಯ ನೇತೃತ್ವದಲ್ಲಿ ಆ. 10 ರಂದು ಮೀಯಪದವು ಚಿಗುರುಪಾದೆ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಸಭಾ ಭವನದಲ್ಲಿ ಮಂಜೇಶ್ವರ ಬ್ಲಾಕ್ ಮಟ್ಟದ ಕೃಷಿಕರ ಸಭೆ ಕರೆಯಲಾಗಿದೆ. ಭಾರತೀಯ ಕಿಸಾನ್ ಸಂಘದ ರಾಜ್ಯ ಉಪಾಧ್ಯಕ್ಷ ಮತ್ತು ರಾಜ್ಯ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ.
ಜಿಲ್ಲೆಯಲ್ಲಿ ತೀವ್ರ ಗಾಳಿ ಹಾಗೂ ಮಳೆಯಿಂದಾಗಿ ಕಂಗಿನ ತೋಟಕ್ಕೆ ಮಹಾಳಿರೋಗ ಬಾಧಿಸಿದ್ದು, ಅಡಿಕೆ ಬಿದ್ದು ಹೋಗಿರುವುದು ಮಾತ್ರವಲ್ಲದೇ ಗಾಳಿಗೆ ಅಡಿಕೆ ಮರಗಳು ಮುರಿದಿರುವುದು ಕೃಷಿಕರನ್ನು ಕಂಗಾಲುಗೊಳಿಸಿದೆ. ಜೊತೆಗೆ ಕಾಡುಪ್ರಾಣಿಗಳ ಉಪಟಳದಿಂದ ಕೃಷಿನಾಶ ಅನುಭವಿಸುವ ರೈತರುಗಳಿಗೆ ಪರಿಹಾರವನ್ನು ತಕ್ಷಣ ನೀಡಬೇಕಾಗಿದೆ. ಇದರ ಬಗ್ಗೆ ಸರ್ಕಾರ ಗಮನಹರಿಸಬೇಕು.
ಕಿಸಾನ್ ಸಂಘವು ಕೃಷಿಕರ, ಸಾಧಕ_ಬಾಧಕಗಳ ಕುರಿತು ಚರ್ಚೆ ನಡೆಸಿ ಕೃಷಿ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಪರಿಹಾರಕ್ಕಾಗಿ ಸಂಬಂಧಿಸಿದ ಇಲಾಖೆಗಳನ್ನು ಸಂಪರ್ಕಿಸಲು ತೀರ್ಮಾನಿಸಲಾಗಿದೆ. ಪರಿಹಾರಕ್ಕಾಗಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟವನ್ನು ಮಾಡುವುದಕ್ಕೂ ತಯಾರಾಗಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಕೃಷಿಕರನ್ನು ಸಂಘಟಿಸಿ, ರೈತರ ಬಗ್ಗೆ ಕಾಳಜಿ ಇರುವ ವಿವಿಧ ಸಂಘ, ಸಂಸ್ಥೆಗಳನ್ನು. ಸಮಾಜದ ಪ್ರಮುಖರು ಸೇರಿ ಪಕ್ಷಾತೀತವಾಗಿ ಕೃಷಿಕರ ಹಿತರಕ್ಷಣೆಗೆಬೇಕಾಗಿ ವೇದಿಕೆಯನ್ನುಂಟುಮಾಡುವುದಾಗಿ ಆ. 06 ರಂದು ಕಾಸರಗೋಡು ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಪುರುಷೋತ್ತಮ ಬೊಡ್ಡನಕೊಚ್ಚಿ ತಿಳಿಸಿರುತ್ತಾರೆ.




