ಮಧೂರು : ಮೊಗೇರ ಸರ್ವೀಸ್ ಸೊಸೈಟಿಯ ರಾಜ್ಯಸಮಿತಿ ಹಾಗೂ ಜಿಲ್ಲಾ ಸಮಿತಿಗಳ ಜಂಟಿ ಆಶ್ರಯದಲ್ಲಿ ಉಳಿಯತ್ತಡ್ಕದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಮೊಗೇರ ಆಟಿದ ಕೂಟ 2025 ಸಂಪನ್ನಗೊಂಡಿತು. ಪೂರ್ವಾಹ್ನ ಮೂಲಸ್ಥಾನದ ಪರಿಸರದಲ್ಲಿ ಮೊಗೇರ ಸರ್ವೀಸ್ ಸೊಸೈಟಿಯ ಮುಖಂಡರು ಹಾಗೂ ಸಮುದಾಯದ ಹಿರಿಯರಿಂದ ದೈವದೇವರುಗಳಿಗೆ ಹಾಗೂ ಮದರು ಮಾತೆಗೆ ಪಾರ್ಥನೆಯನ್ನು ಸಲ್ಲಿಸಲಾಯಿತು. ನಂತರ ಅಟಲ್‍ಜೀ ಸಭಾಂಗಣದಲ್ಲಿ ಕು. ನೇಹಾ ಮೋಹನ್ ಅವರ ಪೂಜಾ ನೃತ್ಯದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಕಾಸರಗೋಡು ಜಿಲ್ಲಾಮೊಗೇರ ಸರ್ವೀಸ್ ಸೊಸೈಟಿಯ ಅಧ್ಯಕ್ಷ ಚಂದ್ರ ಸಿ.ಬಿ. ಅಡೂರು ಅವರ ಅಧ್ಯಕ್ಷತೆಯಲ್ಲಿ ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ. ಗೋಪಾಲಕೃಷ್ಣ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ನಿರಂತರವಾಗಿ ಹೋರಾಡುತ್ತಿರುವ ಮೊಗೇರ ಸರ್ವೀಸ್ ಸೊಸೈಟಿಯ ಸೇವಾ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾದ ಮಧೂರು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ಗಟ್ಟಿ ಮಾತನಾಡಿ, ತುಳುನಾಡಿನಲ್ಲಿ ಆಚಾರ ಸಂಸ್ಕøತಿಗಳನ್ನು ಹಾಗೂ ದೈವಾರಾದನೆಯನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಿರುವ ಮೊಗೇರ ಸಮುದಾಯವು ತುಳುನಾಡಿಗೆ ಮಾದರಿಯಾಗಿದೆ ಎಂದು ತಿಳಿಸಿ ಮಧೂರು ಕ್ಷೇತ್ರದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಬೃಹತ್ ಹೊರೆಕಾಣಿಕೆಯನ್ನು ಸಮಸ್ತ ಮೊಗೇರ ಹೊರೆಕಾಣಿಕೆ ಸಮಿತಿಯ ಮುಖಾಂತರ ತಲುಪಿಸಿ ಮೊಗೇರ ಸಮುದಾಯವು ದಾಖಲೆಯನ್ನೂ ಸಾಧಿಸಿದೆಯೆಂದರು. ರಾಜ್ಯ ಮೊಗೇರ ಸರ್ವೀಸ್ ಸೊಸೈಟಿಯ ಅಧ್ಯಕ್ಷ ಐ.ಲಕ್ಷ್ಮಣ ಪೆರಿಯಡ್ಕ, ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಿಕೆ ಡಾ. ಆಶಾಲತಾ ಚೇವಾರ್ ಮಾತನಾಡಿದರು.
ಕರ್ಣಾಟಕ ರಾಜ್ಯ ಮೊಗೇರ ಸಂಘದ ಅಧ್ಯಕ್ಷ ಮೊಗೇರ ರತ್ನ ಪ್ರಶಸ್ತಿ ವಿಜೇತ ನಂದಿರಾಜ ಸಂಕೇಶ "ಮೊಗೇರೆರ್ ಕೋಡೆ ಇನಿ ಎಲ್ಲೆ" ಎಂಬ ವಿಚಾರಗೋಷ್ಠಿ ನಡೆಸಿಕೊಟ್ಟರು.
ಎಸ್.ಎಸ್.ಎಲ್.ಸಿ. ಹಾಗೂ ಪ್ಲಸ್ ಟುವಿನಲ್ಲಿ 2024-25 ಸಾಲಿನಲ್ಲಿ ಉನ್ನತಂಕಗಳೊಂದಿಗೆ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ನಗದು, ಪುರಸ್ಕಾರಗಳೊಂದಿಗೆ ಅಭಿನಂದಿಸಲಾಯಿತು. ಹಿರಿಯ ಭಜಕ ಪುರುಷೋತ್ತಮ ಕಾಳ್ಯಂಗಾಡ್, ಮೊಗೇರ ಸಮುದಾಯ ಸಂಘಟಕ ಚಂದ್ರ ಪಿ.ಬಿ. ಅಡೂರು, ಕವಿಯತ್ರಿ ಸುಜಯ ಸಜಂಗದ್ದೆ, ರಾಷ್ಟ್ರೀಯ ಕ್ರೀಡಾ ತಾರೆಯರಾದ ಕು. ಅಶ್ವಿನಿ ಬಾಯಾರ್, ಕು. ಶ್ರಾವ್ಯ ಕನಿಯಾಲ ಇವರನ್ನು ಶಾಲು ಹೊದಿಸಿ ಸನ್ಮಾನ ಪತ್ರ ನೀಡಿ ಅಭಿನಂದಿಸಲಾಯಿತು. ರಾಜ್ಯ ಮೊಗೇರ ಸವೀಸ್ ಸೊಸೈಟಿ ಉಪಾಧ್ಯಕ್ಷ ಬೇಡು ಎ.ಪಿ ಕಲ್ಲಕಟ್ಟ ಸ್ವಾಗತಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಕೆ. ಸ್ವಾಮಿಕೃಪಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಪಾಡಿ ವಂದಿಸಿದರು. ಮೊಗೇರ ದುಡಿನಲಿಕೆ ತಂಡ ಕಾಯಿಮಲೆ ಬಳ್ಳೂರು ಇವರಿಂದ ದುಡಿಕುಣಿತ ಎಲ್ಲರನ್ನೂ ರಂಜಿಸಿತು. ಜಾನಪದ ನೃತ್ಯ ವೈವಿಧ್ಯ ಕಾರ್ಯಕ್ರಮದಲ್ಲಿ ವಿವಿಧ ಕಲಾ ತಂಡಗಳಿಂದ ಮನಮೋಹಕ ನೃತ್ಯ ಪ್ರದರ್ಶನಗಳೂ ಜರಗಿತು.




.jpg)
