ನವದೆಹಲಿ: ಅಮೆರಿಕಕ್ಕೆ ಅಂಚೆ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಅಂಚೆ ಇಲಾಖೆಯು ಶನಿವಾರ ಹೇಳಿಕೆ ಬಿಡುಗಡೆ ಮಾಡಿದೆ.
'ಪತ್ರಗಳು/ದಾಖಲೆಗಳು ಮತ್ತು ₹ 8,700 (100 ಡಾಲರ್) ವರೆಗಿನ ವಸ್ತುಗಳನ್ನು ಹೊರತುಪಡಿಸಿ ಅಮೆರಿಕಕ್ಕೆ ಕಳುಹಿಲಾಗುವ ಎಲ್ಲ ರೀತಿಯ ಸರಕುಗಳ ಬುಕಿಂಗ್ ಅನ್ನು 2025ರ ಆಗಸ್ಟ್ 25ರಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ಸ್ಥಗಿಗೊಳಿಸಲು ನಿರ್ಧರಿಸಲಾಗಿದೆ' ಎಂದು ಅಂಚೆ ಇಲಾಖೆ ಪ್ರಕಟಿಸಿದೆ.
800 ಡಾಲರ್ (ಅಂದಾಜು ₹ 69,000) ಮೊತ್ತದ ವರೆಗಿನ ಸರುಕುಗಳಿಗೆ ನೀಡುತ್ತಿದ್ದ ಸುಂಕ ವಿನಾಯಿತಿಯನ್ನು 2025ರ ಆಗಸ್ಟ್ 29ರಿಂದ ಜಾರಿಯಾಗುವಂತೆ ಹಿಂಪಡೆಯಲಾಗುವುದು ಎಂಬುದಾಗಿ ಅಮೆರಿಕ ಇತ್ತೀಚೆಗೆ ಘೋಷಿಸಿದೆ.
'ಅದರ ಪರಿಣಾಮವಾಗಿ, ಅಮೆರಿಕಕ್ಕೆ ಕಳುಹಿಸಲಾಗುವ ಎಲ್ಲ ರೀತಿಯ ಅಂತರರಾಷ್ಟ್ರೀಯ ಅಂಚೆ ವಸ್ತುಗಳು, ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯ (ಐಇಇಪಿಎ) ಅನುಸಾರ ಸುಂಕದ ಚೌಕಟ್ಟಿಗೆ ಬರುತ್ತವೆ. ಆದಾಗ್ಯೂ, ₹ 8,700 ವರೆಗಿನ ವಸ್ತುಗಳಿಗೆ ಸುಂಕ ವಿನಾಯಿತಿ ಇದೆ' ಎಂದು ಅಂಚೆ ಇಲಾಖೆ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

