HEALTH TIPS

ಅರ್ಥವ್ಯವಸ್ಥೆ ಮೇಲೆ ಪ್ರಹಾರ: ಭಾರತಕ್ಕೆ ಶೇ 25 ಸುಂಕ; ಆದೇಶಕ್ಕೆ ಟ್ರಂಪ್‌ ಸಹಿ

ನ್ಯೂಯಾರ್ಕ್‌: ಭಾರತ ಸೇರಿ ವಿವಿಧ ದೇಶಗಳಿಂದ ಅಮೆರಿಕ ಆಮದು ಮಾಡಿಕೊಳ್ಳುವ ಸರಕುಗಳಿಗೆ ಭಾರಿ ಪ್ರಮಾಣದ ಸುಂಕ ವಿಧಿಸುವುದಕ್ಕೆ ಸಂಬಂಧಿಸಿದ ಕಾರ್ಯಕಾರಿ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಗುರುವಾರ ಸಹಿ ಹಾಕಿದ್ದಾರೆ.

ಭಾರತವಲ್ಲದೇ, ಇತರ 70 ರಾಷ್ಟ್ರಗಳಿಗೆ ಕೂಡ ಬೇರೆ ಬೇರೆ ಪ್ರಮಾಣದ ಸುಂಕ ವಿಧಿಸಲಾಗಿದ್ದು, ಶ್ವೇತಭವನ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಟ್ರಂಪ್‌ ಆಡಳಿತದ ಈ ನಡೆಯು ಜಾಗತಿಕ ಅರ್ಥ ವ್ಯವಸ್ಥೆಯನ್ನು ಪುನರ್‌ಸಂಘಟನೆಯತ್ತ ದೂಡಲಿದೆ. ಮತ್ತೊಂದೆಡೆ, ವಿಶ್ವದ ಆರ್ಥಿಕತೆ ಹಾಗೂ ಮಿತ್ರ ರಾಷ್ಟ್ರಗಳು ಅಮೆರಿಕದೊಂದಿಗೆ ಹಲವು ದಶಕಗಳಿಂದ ಹೊಂದಿರುವ ಬಾಂಧವ್ಯ ಎಷ್ಟು ದೃಢವಾಗಿ ನಿಲ್ಲಲಿದೆ ಎಂಬುದನ್ನು ಕೂಡ ಈ ಕ್ರಮವು ಒರೆಗೆ ಹಚ್ಚಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಕ್ಕೆ ಶುಕ್ರವಾರ ಕೊನೆಯ ದಿನವಾಗಿತ್ತು. ಈಗ, ಒಪ್ಪಂದ ಕುರಿತು ಮತ್ತೆ ಮಾತುಕತೆಗೆ ಅವಕಾಶ ಕಲ್ಪಿಸಲಾಗಿದ್ದು, ಹೊಸ ಸುಂಕಗಳು ಆಗಸ್ಟ್‌ 7ರಿಂದ ಜಾರಿಯಾಗಲಿವೆ. ಇದು ಅನೇಕ ರಾಷ್ಟ್ರಗಳು ನಿರಾಳಗೊಳ್ಳುವಂತೆ ಮಾಡಿದೆ.

ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸಲಾಗುತ್ತದೆ. ಕೆನಡಾ ಮೇಲೆ ವಿಧಿಸಲಾಗುವ ಸುಂಕದ ಪ್ರಮಾಣ ಶೇ 35.

ಬ್ರೆಜಿಲ್‌ಗೆ ಶೇ 50ರಷ್ಟು ಸುಂಕ ವಿಧಿಸಲಾಗುವುದು ಎಂದು ಈ ಮೊದಲು ಟ್ರಂಪ್‌ ಘೋಷಿಸಿದ್ದರು. ಈಗ ಹೊರಡಿಸಿರುವ ಕಾರ್ಯಕಾರಿ ಆದೇಶದಲ್ಲಿ ಈ ಸುಂಕದ ಪ್ರಮಾಣ ಶೇ 10ರಷ್ಟು ಎಂದು ಉಲ್ಲೇಖಿಸಲಾಗಿದೆ. ಬ್ರೆಜಿಲ್‌ನಿಂದ ಆಮದು ಮಾಡಿಕೊಳ್ಳುವ ಕೆಲ ಸರಕುಗಳಿಗೆ ಸಂಬಂಧಿಸಿ ಪ್ರತ್ಯೇಕ ಕ್ರಮಕ್ಕೆ ಟ್ರಂಪ್‌ ಅನುಮೋದನೆ ನೀಡಿದ್ದು, ಹೀಗಾಗಿ, ಇವು ಶೇ 40ರಷ್ಟು ಸುಂಕದ ವ್ಯಾಪ್ತಿಗೆ ಬರಲಿವೆ.

'ಕೆನಡಾದಿಂದ ಆಮದು ಮಾಡಿಕೊಳ್ಳಲಾಗುವ ಸರಕುಗಳ ಮೇಲೆ ಶೇ 35ರಷ್ಟು ಸುಂಕ ವಿಧಿಸಲಾಗುತ್ತದೆ. ಈ ಕುರಿತು ಮಾತುಕತೆ ನಡೆಸುವ ಸಂಬಂಧ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಕರೆ ಮಾಡಿದ್ದರು. ಆದರೆ, ಅವರೊಂದಿಗೆ ಮಾತನಾಡಲಿಲ್ಲ' ಎಂದು ಟ್ರಂಪ್‌ ಹೇಳಿದ್ದಾರೆ.

ಈಗ ಕೆನಡಾ ಕೂಡ ಟ್ರಂಪ್‌ ಕೆಂಗಣ್ಣಿಗೆ ಗುರಿಯಾಗಿದೆ. ಈ ಮೊದಲು ಕೆನಡಾ ಮೇಲೆ ಶೇ 25ರಷ್ಟು ಸುಂಕ ಹೇರುವುದಾಗಿ ಟ್ರಂಪ್‌ ಹೇಳಿದ್ದರು. ಗುರುವಾರ ಈ ಕುರಿತ ಆದೇಶವನ್ನು ತಿದ್ದುಪಡಿ ಮಾಡಿ, ಸುಂಕದ ಪ್ರಮಾಣವನ್ನು ಶೇ 35ಕ್ಕೆ ಹೆಚ್ಚಳ ಮಾಡಲಾಗಿದೆ.

ಭಾರತಕ್ಕೆ ಶೇ 25ರಷ್ಟು 'ಹೊಂದಾಣಿಕೆ ಮಾಡಲಾದ ಪ್ರತಿ ಸುಂಕ' ವಿಧಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಹಾಗೂ ಇಂಧನ ಖರೀದಿ ಮಾಡುತ್ತಿರುವುದಕ್ಕಾಗಿ ಭಾರತಕ್ಕೆ 'ದಂಡ' ವಿಧಿಸುವುದಾಗಿ ಟ್ರಂಪ್‌ ಇತ್ತೀಚೆಗೆ ಘೋಷಿಸಿದ್ದರು. ಆದರೆ, ಈ ಕುರಿತು ಕಾರ್ಯಕಾರಿ ಆದೇಶದಲ್ಲಿ ಯಾವುದೇ ಉಲ್ಲೇಖವಿಲ್ಲ.

'ಅಮೆರಿಕದೊಂದಿಗೆ ಭಾರತವು ಶೀಘ್ರವೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಭರವಸೆ ಇದೆ. ಆದರೆ, ಈಗ ಭಾರತದಿಂದ ಅಮೆರಿಕ ಆಮದು ಮಾಡಿಕೊಳ್ಳುವ ಸರಕುಗಳಿಗೆ ಶೇ 25ರಷ್ಟು ಸುಂಕ ವಿಧಿಸುತ್ತಿರುವುದರಿಂದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಕುರಿತು ಹಲವು ಪ್ರಶ್ನೆಗಳು ಉದ್ಭವಿಸಿವೆ' ಎಂದು ಏಷ್ಯಾ ಸೊಸೈಟಿ ಪಾಲಿಸಿ ಇನ್‌ಸ್ಟಿಟ್ಯೂಟ್‌ನ (ಎಎಸ್‌ಪಿಐ) ಹಿರಿಯ ಉಪಾಧ್ಯಕ್ಷ ವೆಂಡಿ ಕಟ್ಲರ್‌ ಹೇಳಿದ್ದಾರೆ.

'ಅಮೆರಿಕಕ್ಕೆ ಸಾಗುತ್ತಿರುವ ಹಾಗೂ ಆಗಸ್ಟ್‌ 7ರ ಒಳಗಾಗಿ ಅಮೆರಿಕಕ್ಕೆ ಪ್ರಯಾಣ ಬೆಳೆಸಲು ಸಜ್ಜಾಗಿ ನಿಂತಿರುವ ಹಡಗುಗಳಲ್ಲಿನ ಸರಕುಗಳಿಗೆ ಈ ಸುಂಕದಿಂದ ವಿನಾಯಿತಿ ನೀಡಲಾಗಿದೆ' ಎಂದು ಭಾರತೀಯ ರಫ್ತು ಸಂಘಟನೆಗಳ ಮಹಾ ಒಕ್ಕೂಟದ (ಎಫ್‌ಐಇಒ) ಪ್ರಧಾನ ನಿರ್ದೇಶಕ ಅಜಯ್‌ ಸಹಾಯ್ ಹೇಳಿದ್ದಾರೆ.

ಅಕ್ಟೋಬರ್‌ 5ರ ಒಳಗೆ ಬಳಕೆ ಉದ್ದೇಶದ ಸರಕುಗಳಿಗೆ ಕೂಡ ಪ್ರತಿಸುಂಕದಿಂದ ವಿನಾಯಿತಿ ನೀಡಲಾಗಿದೆ. ಹೀಗಾಗಿ, ಈಗಾಗಲೇ ಅಮೆರಿಕಕ್ಕೆ ಕಳುಹಿಸಿರುವ ಅಥವಾ ಈ ವಾರದಲ್ಲಿ ಕಳುಹಿಸಲಾಗುತ್ತಿರುವ ಸರಕುಗಳ ರಫ್ತುದಾರರಿಗೆ ತಕ್ಕಮಟ್ಟಿನ ನಿರಾಳತೆ ಸಿಕ್ಕಂತಾಗಿದೆ.

'ಸವಾಲಿನ ಕೆಲಸ': ಬೇರೆ ಬೇರೆ ದೇಶಗಳಿಗೆ ವಿಧಿಸುತ್ತಿರುವ ಸುಂಕದ ಪ್ರಮಾಣದಲ್ಲಿ ವ್ಯತ್ಯಾಸ ಇದೆ. ಈ ಕಾರಣಕ್ಕೆ, ಸುಂಕ ಹೆಚ್ಚಳ ಮಾಡಿ ಹೊರಡಿಸಿರುವ ಕಾರ್ಯಕಾರಿ ಆದೇಶವನ್ನು ಅನುಷ್ಠಾನಕ್ಕೆ ತರುವಲ್ಲಿ ಅಮೆರಿಕದ ಕಸ್ಟಮ್ಸ್‌ ಅಧಿಕಾರಿಗಳಿಗೆ ಹಲವು ಸವಾಲುಗಳು ಎದುರಾಗಲಿವೆ ಎಂದು ಕಟ್ಲರ್‌ ಹೇಳುತ್ತಾರೆ.

'ಹೊಸ ಸುಂಕಗಳಿಂದಾಗಿ ಅಮೆರಿಕದಲ್ಲಿನ ಹಲವಾರು ಕಂಪನಿಗಳು ಕೂಡ ಸವಾಲು ಎದುರಿಸಬೇಕಾಗುತ್ತದೆ. ವಲಯವಾರು ಸುಂಕದ ಪ್ರಮಾಣ ಬೇರೆಯಾಗಿರುವುದು ಮೊದಲ ಕಾರಣ. ಇನ್ನು, ಅಮೆರಿಕಕ್ಕೆ ಸರಕುಗಳನ್ನು ರಫ್ತು ಮಾಡುವ ದೇಶಗಳು ಕಾರ್ಯಕಾರಿ ಆದೇಶಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ ಎಂದು ಸರ್ಕಾರ ಭಾವಿಸಿದಲ್ಲಿ, ಆಗ ಹೆಚ್ಚುವರಿ ಸುಂಕ ಹೇರುವ ಸಾಧ್ಯತೆಗಳಿವೆ' ಎಂದು ಕಟ್ಲರ್‌ ವಿಶ್ಲೇಷಿಸುತ್ತಾರೆ.

ಹಲವು ಬದಲಾವಣೆ

ಆರಂಭದಲ್ಲಿ ಆಫ್ರಿಕ ರಾಷ್ಟ್ರವಾದ ಲೆಸೊಥೊ ಮೇಲೆ ಶೇ 50ರಷ್ಟು ಸುಂಕ ಹೇರುವುದಾಗಿ ಟ್ರಂಪ್‌ ಬೆದರಿಕೆ ಹಾಕಿದ್ದರು. ಈಗ ಈ ದೇಶದ ಮೇಲೆ ಶೇ15ರಷ್ಟು ಸುಂಕ ವಿಧಿಸಲಾಗುತ್ತದೆ. ತೈವಾನ್‌ ಮೇಲೆ ಶೇ 20 ಪಾಕಿಸ್ತಾನ-ಶೇ 19 ಇಸ್ರೇಲ್‌ ಐಸ್‌ಲ್ಯಾಂಡ್‌ ನಾರ್ವೆ ಫಿಜಿ ಘಾನಾ ಗಯಾನಾ ಮತ್ತು ಈಕ್ವಡಾರ್‌ಗಳಿಗೆ ಶೇ 15ರಷ್ಟು ಸುಂಕ ವಿಧಿಸಲಾಗುತ್ತದೆ ಎಂದು ಕಾರ್ಯಕಾರಿ ಆದೇಶದಲ್ಲಿ ಹೇಳಲಾಗಿದೆ. ಸ್ವಿಟ್ಜರ್ಲೆಂಡ್ ಮೇಲೆ ಶೇ 39ರಷ್ಟು ಸುಂಕ ವಿಧಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries