HEALTH TIPS

ತ್ರಿಶ್ಶೂರ್: ಲೋಕಸಭೆ ಚುನಾವಣೆಗೆ ಮುನ್ನ 30ಸಾವಿರ ನಕಲಿ ಮತದಾರರ ಸೇರ್ಪಡೆ; ಸಿಪಿಎಂ

ತಿರುವನಂತಪುರಂ: ಕಳೆದ ಲೋಕಸಭಾ ಚುನಾವಣೆಗೆ ಮುನ್ನ ಕೇರಳದ ತ್ರಿಶ್ಶೂರ್ ಕ್ಷೇತ್ರದಲ್ಲಿ ಬಿಜೆಪಿಯವರು ಸುಮಾರು 30,000 'ನಕಲಿ ಮತದಾರರನ್ನು' ಮತದಾರರ ಪಟ್ಟಿಗೆ ಸೇರಿಸಿರುವ ಮಾಹಿತಿ ಲಭಿಸಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ ಬೇಬಿ ಭಾನುವಾರ ಆರೋಪಿಸಿದ್ದಾರೆ.

ತ್ರಿಶ್ಶೂರ್ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸಮೀಪದ ಸ್ಥಳಗಳ ಹಲವು ವ್ಯಕ್ತಿಗಳನ್ನು ಸೇರಿಸಲಾಗಿದೆ ಎಂದು ಹೇಳಲಾಗಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಚುನಾವಣಾ ಆಯೋಗವು ತನ್ನ ಸಾಂವಿಧಾನಿಕ ಸಂಸ್ಥೆಯ ಸ್ಥಾನಮಾನವನ್ನು ಮರೆತು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ಸಹಾಯಕನಂತೆ ವರ್ತಿಸುತ್ತಿದೆ ಎಂದು ದೂರಿದ್ದಾರೆ.

ಕಳೆದ ಲೋಕಸಭೆ ಚುನಾವಣೆಗೆ ಚುನಾವಣಾ ಆಯೋಗ ಪ್ರಕಟಿಸಿದ ಮತದಾರರ ಪಟ್ಟಿಯಲ್ಲಿನ ಅಕ್ರಮಗಳನ್ನು ಹೊರಗೆಳೆಯುವ ಕೆಲಸವನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ಸರ್ಕಾರವು ಸುಪ್ರೀಂ ಕೋರ್ಟ್‌ ನೀಡಿರುವ ಸಲಹೆಗಳನ್ನು ಪರಿಗಣಿಸದೆ, ತನಗೆ ಬೇಕಾದವರನ್ನು ಚುನಾವಣಾ ಆಯೋಗದ ವಿವಿಧ ಹುದ್ದೆಗಳಿಗೆ ನೇಮಿಸಿದೆ. ಇದೀಗ ಅವರು 'ಮೋಸದಲ್ಲಿ ತೊಡಗಿದ್ದಾರೆ' ಎಂದು ಆರೋಪಿಸಿದ್ದಾರೆ.

'ಒಂದೆಡೆ ಅವರು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ನೆಪದಲ್ಲಿ ಅರ್ಹ ಮತದಾರರ ಹೆಸರನ್ನು ಅಳಿಸುತ್ತಿದ್ದಾರೆ. ಮತ್ತೊಂದೆಡೆ, ಒಂದು ಸ್ಥಳದಲ್ಲಿ ಎರಡು ದಿನಗಳಿಗಿಂತ ಹೆಚ್ಚು ನೆಲಸದೆ ಇರುವವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುತ್ತಿದ್ದಾರೆ' ಎಂದು ಟೀಕಿಸಿದರು.

ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಮತದಾನದ ಹಕ್ಕು ಪಡೆಯಬೇಕಾದರೆ ಒಬ್ಬ ವ್ಯಕ್ತಿ ಕನಿಷ್ಠ ಆರು ತಿಂಗಳ ಕಾಲ ಒಂದು ಸ್ಥಳದ ನಿವಾಸಿಯಾಗಿರಬೇಕು ಎಂಬ ನಿಯಮವನ್ನು ಗಾಳಿಗೆ ತೂರಲಾಗುತ್ತಿದೆ ಎಂದು ದೂರಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries