HEALTH TIPS

ನೋಟಿಸ್ ನೀಡದೆ ಯಾವ ಮತದಾರನ ಹೆಸರನ್ನೂ ಪಟ್ಟಿಯಿಂದ ತೆಗೆಯಲ್ಲ: ಚುನಾವಣಾ ಆಯೋಗ

ನವದೆಹಲಿ: ನೀತಿ ಹಾಗೂ ಸಾಮಾನ್ಯ ನ್ಯಾಯ ತತ್ವವನ್ನು ಕಟ್ಟುನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ಬಿಹಾರದಲ್ಲಿ ನಡೆಸಲಾದ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಬಳಿಕ ಪ್ರಕಟಿಸಿರುವ ಮತದಾರರ ಕರಡು ಪಟ್ಟಿಯಿಂದ ಯಾವುದೇ ಮತದಾರರ ಹೆಸರನ್ನು ಅಳಿಸಿಲ್ಲ ಎಂದು ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಸಂಬಂಧಪಟ್ಟವರಿಗೆ ಸೂಚನೆ ನೀಡದೆ ಹೆಸರುಗಳನ್ನು ಕೈಬಿಡುವ ಕ್ರಮ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಆಯೋಗ, ಅಂತಹ ಮತದಾರರಿಗೆ ತಮ್ಮ ಅಹವಾಲು ಸಲ್ಲಿಸಲು ಮತ್ತು ಸಂಬಂಧಿತ ದಾಖಲೆಗಳನ್ನು ಒದಗಿಸಲು ಸೂಕ್ತ ಅವಕಾಶಗಳನ್ನು ಒದಗಿಸಲಾಗುವುದು ಎಂದೂ ಹೇಳಿದೆ.

ಬಿಹಾರದಲ್ಲಿ SIR ಸಮಯದಲ್ಲಿ ಸುಮಾರು 65 ಲಕ್ಷ ಜನರ ಹೆಸರನ್ನು ಸಕಾರಣ ನೀಡದೆ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಿ 'ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್‌' ಎನ್‌ಜಿಒ ಸುಪ್ರೀಂ ಕೋರ್ಟ್‌ಗೆ ಆಗಸ್ಟ್‌ 6ರಂದು ಅರ್ಜಿ ಸಲ್ಲಿಸಿತ್ತು. ಈ ಸಂಬಂಧದ ನೋಟಿಸ್‌ಗೆ ಚುನಾವಣಾ ಆಯೋಗ ಪ್ರತಿಕ್ರಿಯೆ ನೀಡಿದೆ.

ಆರೋಪಗಳನ್ನು ನಿರಾಕರಿಸಿ ಶನಿವಾರ ಹೆಚ್ಚುವರಿ ಅಫಿಡವಿಟ್‌ ಸಲ್ಲಿಸಿರುವ ಆಯೋಗ, ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕುವುದರ ವಿರುದ್ಧ ಸಂಬಂಧಿತ ನಿಯಮಗಳ ಅಡಿಯಲ್ಲಿ ಎರಡು ಹಂತದ ಮೇಲ್ಮನವಿಗೆ ಅವಕಾಶ ಕಲ್ಪಿಸಲಾಗಿದೆ. ಆ ಮೂಲಕ ಸುರಕ್ಷತಾ ಕ್ರಮಗಳನ್ನು ಬಲಪಡಿಸಲಾಗಿದೆ ಎಂದು ಪ್ರತಿಕ್ರಿಯಿಸಿದೆ.

ಸಾರ್ವಜನಿಕರು ಅಥವಾ ರಾಜಕೀಯ ಪಕ್ಷಗಳಿಂದ ಬರುವ ಆಕ್ಷೇಪಣೆಗಳ ಕುರಿತು ಸಾರ್ವಜನಿಕರಿಗೆ ತಿಳಿಸುವ ಸಲುವಾಗಿ ಆಯೋಗವು ನಿತ್ಯವೂ ಪತ್ರಿಕಾ ಪ್ರಕಟಣೆಗಳನ್ನು ಬಿಡುಗಡೆ ಮಾಡುತ್ತಿದೆ. ಹೆಸರುಗಳನ್ನು ಅಳಿಸುವ ಸಂಬಂಧ ನೀಡಿದ ನೋಟಿಸ್‌ ಅವಧಿ ಮುಕ್ತಾಯದ ಬಳಿಕ ಸಕ್ಷಮ ಪ್ರಾಧಿಕಾರವು ಕ್ರಮ ಕೈಗೊಳ್ಳಲಿದೆ ಎಂದು ಉಲ್ಲೇಖಿಸಿದೆ.

ಬಿಹಾರದಲ್ಲಿ SIRನ ಮೊದಲ ಹಂತ ಪೂರ್ಣಗೊಂಡಿದೆ. ಪಟ್ಟಿಯಲ್ಲಿರುವ ಮತದಾರರಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುವ ಸಲುವಾಗಿ ಬೂತ್‌ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಪ್ರತಿ ಮನೆಗಳಿಗೆ ಭೇಟಿ ನೀಡಿದ್ದರು. ಅದರಂತೆ, ಕರಡು ಪಟ್ಟಿಯನ್ನು ಇದೇ ಆಗಸ್ಟ್‌ 1ರಂದು ಪ್ರಕಟಿಸಲಾಗಿದೆ ಎಂದಿದೆ.

ಪ್ರತಿಯೊಬ್ಬ ಅರ್ಹ ಮತದಾರರನ್ನೂ ಪಟ್ಟಿಗೆ ಸೇರಿಸುವ ಉದ್ದೇಶದಿಂದ ಆಯೋಗವು, ಪಟ್ಟಿಯಲ್ಲಿಲ್ಲದ ಅರ್ಹರು ತಮ್ಮ ಗಣತಿ ನಮೂನೆಗಳನ್ನು 2025ರ ಜುಲೈ 27ರೊಳಗೆ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್‌ಗಳೊಂದಿಗೆ ಹಂಚಿಕೊಳ್ಳುವಂತೆ ಮಾಡಿತ್ತು. ಇದರಿಂದಾಗಿ, ಪರಿಶೀಲನೆ ಸಂದರ್ಭದಲ್ಲಿ ದೋಷಗಳನ್ನು ಸರಿಪಡಿಸಲು ಸಾಧ್ಯ ಮತ್ತು ಕರಡುಪಟ್ಟಿಗೆ ಹೆಸರುಗಳನ್ನು ಸೇರಿಸಬಹುದು. ನವೀಕರಿಸಲಾದ ಪಟ್ಟಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಮತ್ತೊಮ್ಮೆ ಹಂಚಿಕೊಳ್ಳಲಾಗುವುದು ಎಂದು ತಿಳಿಸಿದೆ.

ರಾಜ್ಯದ ವಿವಿಧ ಇಲಾಖೆಗಳಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸುವುದೂ ಸೇರಿದಂತೆ ಮತದಾರರಿಗೆ ನೆರವಾಗುವ ಸಲುವಾಗಿ ಚುನಾವಣಾ ಆಯೋಗವು SIR ಪ್ರಕ್ರಿಯೆಗಾಗಿ ಸುಮಾರು 2.5 ಲಕ್ಷ ಸಿಬ್ಬಂದಿ/ಸ್ವಯಂ ಸೇವಕರನ್ನು ನಿಯೋಜಿಸಿತ್ತು. ಅವರಲ್ಲಿ ಹೆಚ್ಚಿನವರು ಬಿಹಾರದ ಸರ್ಕಾರಿ ಅಧಿಕಾರಿಗಳು ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಕರಡು ಪಟ್ಟಿಯನ್ನು ಆಗಸ್ಟ್‌ 1ರಿಂದ ಸೆಪ್ಟೆಂಬರ್‌ 1ರ ವರೆಗೆ ಸಂಪೂರ್ಣ ಪರಿಶೀಲನೆ ನಡೆಸಲು ಅನುಕೂಲವಾಗುವಂತೆ ರಾಜಕೀಯ ಪಕ್ಷಗಳಿಗೆ ಮುದ್ರಿತ ಮತ್ತು ಡಿಜಿಟಲ್‌ ಪ್ರತಿಗಳನ್ನು ನೀಡಲಾಗಿದೆ. ಸಾರ್ವಜನಿಕರಿಗೂ ಆನ್‌ಲೈನ್‌ ಮೂಲಕ ಪಟ್ಟಿ ಸಿಗುವಂತೆ ಮಾಡಲಾಗಿದೆ. ಹಾಗೆಯೇ, ಬಿಹಾರದಿಂದ ತಾತ್ಕಾಲಿಕವಾಗಿ ವಲಸೆ ಹೋಗಿರುವ ಯಾವುದೇ ಮತದಾರನ ಹೆಸರೂ ಪಟ್ಟಿಯಿಂದ ಬಿಟ್ಟುಹೋಗದಂತೆ ಖಚಿತಪಡಿಸಿಕೊಳ್ಳಲು ಸುಮಾರು 246 ಪತ್ರಿಕೆಗಳಲ್ಲಿ ಹಿಂದಿಯಲ್ಲಿ ಜಾಹೀರಾತುಗಳನ್ನು ನೀಡಲಾಗಿದೆ. ಹೊರ ರಾಜ್ಯಗಳಿಂದ ಆನ್‌ಲೈನ್‌ ಮತ್ತು ಭೌತಿಕವಾಗಿಯೂ ಅರ್ಜಿಗಳನ್ನು ಸ್ವೀಕರಿಸುವಂತೆ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಚುನಾವಣಾಧಿಕಾರಿಗಳನ್ನು ಕೋರಲಾಗಿದೆ ಎಂದು ಮಾಹಿತಿ ನೀಡಿದೆ.

ಪ್ರತಿಯೊಬ್ಬ ಮತದಾರರು ಹಾಗೂ ಎಲ್ಲ ರಾಜಕೀಯ ಪಕ್ಷಗಳ ಭಾಗವಹಿಸುವಿಕೆಯನ್ನು ಖಾತ್ರಿಪಡಿಸಿಕೊಳ್ಳಲು ಶ್ರಮಿಸಲಾಗಿದೆ. ಅದರ ಫಲವಾಗಿ ಸುಮಾರು 7.89 ಕೋಟಿ ಮತದಾರರ ಪೈಕಿ 7.24 ಕೋಟಿಗೂ ಅಧಿಕ ಮತದಾರರು ತಮ್ಮ ಗಣತಿ ನಮೂನೆಗಳನ್ನು ಸಲ್ಲಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಬಿಹಾರದ ಮುಖ್ಯಚುನಾವಣಾಧಿಕಾರಿ, 38 ಜಿಲ್ಲೆಗಳ ಚುನಾವಣಾಧಿಕಾರಿಗಳು, 243 ಚುನಾವಣಾ ನೋಂದಣಾಧಿಕಾರಿಗಳು, 2,976 ಸಹಾಯಕ ಚುನಾವಣಾಧಿಕಾರಿಗಳು, 77,895 ಬೂತ್‌ ಮಟ್ಟದ ಅಧಿಕಾರಿಗಳು, 2.45 ಲಕ್ಷಕ್ಕೂ ಅಧಿಕ ಸ್ವಯಂಸೇವಕರು ಹಾಗೂ ಎಲ್ಲ ರಾಜಕೀಯ ಪಕ್ಷಗಳ 1.60 ಲಕ್ಷಕ್ಕೂ ಹೆಚ್ಚು ಬೂತ್‌ ಮಟ್ಟದ ಏಜೆಂಟ್‌ಗಳು ಸಕ್ರಿಯವಾಗಿ ಭಾಗವಹಿಸಿದ್ದಾರೆ ಎಂದು ವಿವರಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries