HEALTH TIPS

ಜಮ್ಮು ಮತ್ತು ಕಾಶ್ಮೀರದಲ್ಲಿ ಮೇಘಸ್ಫೋಟ: ಸಾವಿನ ಸಂಖ್ಯೆ 60ಕ್ಕೆ ಏರಿಕೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತವಾಡ ಜಿಲ್ಲೆಯ ಚಸೌತಿ ಗ್ರಾಮದಲ್ಲಿ ಗುರುವಾರ ಸಂಭವಿಸಿದ ಮೇಘಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 60ಕ್ಕೆ ಏರಿಕೆಯಾಗಿದ್ದು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಘಟನೆ ಕುರಿತು ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.

ಶುಕ್ರವಾರದ ಬೆಳವಣಿಗೆ....

  • ಇದುವರೆಗೂ 160 ಮಂದಿ ರಕ್ಷಿಸಲಾಗಿದ್ದು, ಈ ಪೈಕಿ 38 ಮಂದಿ ಸ್ಥಿತಿ ಚಿಂತಾಜನಕವಾಗಿದೆ

  • ಚಸೌತಿಯಿಂದ 15 ಕಿ.ಮೀ ದೂರದ ಪದ್ದಾರ್‌ನಲ್ಲಿ ನಿಯಂತ್ರಣ ಕೊಠಡಿ, ಸಹಾಯವಾಣಿ ಸ್ಥಾಪನೆ

  • ಚೆನಾಬ್‌ ನದಿಯಲ್ಲಿ ತೇಲಿಹೋದ 10 ಮಂದಿ ಮೃತದೇಹಗಳು- ಗ್ರಾಮಸ್ಥರಿಂದ ಮಾಹಿತಿ

  • ತೆರವು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಸೇನಾ ಸಿಬ್ಬಂದಿ

  • 16 ಮನೆಗಳು, ಮೂರು ದೇವಾಲಯಗಳು, 30 ಮೀಟರ್‌ ಉದ್ದದ ಸೇರುವೆ, ಡಜನ್‌ಗೂ ಅಧಿಕ ವಾಹನಗಳಿಗೆ ಹಾನಿ

  • ಸಮುದಾಯ ಅಡುಗೆ ಕೋಣೆ ಸ್ಥಾಪಿಸಿ, ಭಕ್ತರು, ಸಂತ್ರಸ್ತರಿಗೆ ಆಹಾರ ವಿತರಣೆ

  • ಜಮ್ಮು ವೈದ್ಯಕೀಯ ಕಾಲೇಜಿನಲ್ಲಿ 50 ಸಾಧಾರಣ ಬೆಡ್‌, 20 ವೆಂಟಿಲೇಟರ್‌ ಬೆಡ್‌ಗಳ ವ್ಯವಸ್ಥೆ

  • ಸಂತ್ರಸ್ತರ ನೆರವಿಗೆ 65 ಆಂಬುಲೆನ್ಸ್‌ಗಳ ನಿಯೋಜನೆ

  • 300 ಮಂದಿ ವೈದ್ಯಕೀಯ ಸಿಬ್ಬಂದಿಯಿಂದಲೂ ನಿರಂತರ ಸೇವೆ

'ನಾನು ಈಗಷ್ಟೇ ಪ್ರಧಾನಿ ಮೋದಿ ಅವರ ಕರೆ ಸ್ವೀಕರಿಸಿದೆ. ಕಿಶ್ತವಾಡದ ಪರಿಸ್ಥಿತಿ, ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದೆ' ಎಂದು ಅಬ್ದುಲ್ಲಾ ಅವರು 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದಾರೆ.

'ಮೇಘಸ್ಫೋಟದಲ್ಲಿ ದುರಂತಕ್ಕೆ ಒಳಗಾದ ತಕ್ಷಣವೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರ ನೀಡಿದ ನೆರವಿಗೆ ರಾಜ್ಯ ಸರ್ಕಾರ, ಜನರು ಆಭಾರಿಯಾಗಿದ್ದೇವೆ' ಎಂದು ಹೇಳಿದರು.

ಇದಕ್ಕೂ ಮುನ್ನ ಇಲ್ಲಿನ ಬಕ್ಷಿ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನದ ಸಮಾರಂಭದಲ್ಲಿ ಮಾತನಾಡಿದ ಅವರು,'ಗುರುವಾರ ಸಂಭವಿಸಿದ ದುರಂತದಿಂದ 60 ಮಂದಿ ಮೃತಪಟ್ಟಿದ್ದು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಭಾರಿ ಮಳೆ, ದಿಢೀರ್‌ ಪ್ರವಾಹದ ಮೊದಲೇ ಮುನ್ಸೂಚನೆ ಸಿಕ್ಕಿತ್ತು, ಆದಾಗ್ಯೂ ನಮ್ಮಿಂದ ಏನಾದರೂ ಲೋಪವಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುವುದು' ಎಂದು ತಿಳಿಸಿದ್ದಾರೆ.

'ಇಡೀ ದೇಶಕ್ಕೆ ಆಗಸ್ಟ್‌ 15 ಸಂತಸದ ದಿನವಾಗಿದೆ. ಇದೇ ಸಂದರ್ಭದಲ್ಲಿ ಮೇಘಸ್ಫೋಟದಲ್ಲಿ 60 ಮಂದಿ ಮೃತಪಟ್ಟಿರುವುದು ಹೃದಯವಿದ್ರಾವಕ ವಿಚಾರವಾಗಿದೆ. ಹಲವು ಮಂದಿ ಕಣ್ಮರೆಯಾಗಿದ್ದಾರೆ. ನಿಖರ ಅಂಕಿಅಂಶ ಇನ್ನಷ್ಟೇ ತಿಳಿಯಬೇಕಿದೆ. ಮೃತಪಟ್ಟವರಿಗೆ ಸಂತಾಪ ಸಲ್ಲಿಸುತ್ತೇವೆ. ಗಾಯಾಳುಗಳಿಗೆ ಸರ್ಕಾರವೇ ಸೂಕ್ತ ನೆರವು ನೀಡಲಿದೆ' ಎಂದು ಅಬ್ದುಲ್ಲಾ ಭರವಸೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries