ನವದೆಹಲಿ : ಬಿಹಾರದಲ್ಲಿ (Bihar) ಆಗಸ್ಟ್ 17ರಿಂದ 'ಮತದಾರ ಅಧಿಕಾರ ಯಾತ್ರೆ' ಆರಂಭಗೊಳ್ಳಲಿದೆ. ಆ ಮೂಲಕ ದೇಶವ್ಯಾಪಿ 'ಮತದಾನ ಕಳ್ಳತನ' (Vote rigging) ವಿರುದ್ಧ ನೇರ ಹೋರಾಟಕ್ಕೆ ಇಳಿಯುವುದಾಗಿ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul gandhi) ಘೋಷಿಸಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಗಾಂಧಿ ವಿಡಿಯೊ ಸಂದೇಶ ಹಂಚಿಕೊಂಡಿದ್ದು, 'ಆಗಸ್ಟ್ 17ರಿಂದ ನಾವು ಬಿಹಾರದ ನೆಲದಲ್ಲಿ ಮತ ಕಳ್ಳತನದ ವಿರುದ್ಧ ನೇರ ಹೋರಾಟಕ್ಕಿಳಿಯಲಿದ್ದೇವೆ' ಎಂದು ಹೇಳಿದ್ದಾರೆ.
'ಇದು ಕೇವಲ ಚುನಾವಣೆಗೆ ಸಂಬಂಧಿಸಿದ್ದಲ್ಲ. ನಮ್ಮ ಪ್ರಜಾಪ್ರಭುತ್ವ, ನಮ್ಮ ಸಂವಿಧಾನ ಮತ್ತು ಒಬ್ಬ ವ್ಯಕ್ತಿ, ಒಂದು ಮತ ಮೂಲ ತತ್ವವನ್ನು ರಕ್ಷಿಸುವುದಕ್ಕೆ ಸಂಬಂಧಪಟ್ಟದ್ದಾಗಿದೆ' ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ. 'ದೇಶದ ಪ್ರತಿಯೊಂದು ಮತದಾರರ ಪಟ್ಟಿಯೂ ಸರಿಯಾಗುವವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ. ಯುವಕರು, ಕಾರ್ಮಿಕರು, ರೈತರು ಮತ್ತು ಪ್ರತಿಯೊಬ್ಬ ನಾಗರಿಕನೂ ಈ ಹೋರಾಟದಲ್ಲಿ ಕೈಜೋಡಿಸಬೇಕು' ಎಂದು ಮನವಿ ಮಾಡಿದ್ದಾರೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಹೆಸರಿನಲ್ಲಿ ನಡೆಯುತ್ತಿರುವ ಮತದಾನ ಹಕ್ಕು ಕಸಿಯುತ್ತಿರುವ ಸಂವಿಧಾನ ವಿರೋಧಿ ನಡೆಯ ವಿರುದ್ಧ ಇಂಡಿಯಾ ಮೈತ್ರಿಕೂಟದ ನಾಯಕರು ರಾಜ್ಯಾದ್ಯಂತ 'ಮತದಾರ ಅಧಿಕಾರ ಯಾತ್ರೆ'ಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಉಸ್ತುವಾರಿ ಮತ್ತು ಪಕ್ಷದ ಸಂಘಟನೆಗಳ ಸಭೆಯ ನಂತರ, ಮೂರು ಹಂತಗಳ ವಿಶೇಷ ಅಭಿಯಾನವನ್ನು ಘೋಷಿಸಲಾಗಿದೆ. ಆಗಸ್ಟ್ 14ರಂದು ಎಲ್ಲಾ ಜಿಲ್ಲೆಗಳಲ್ಲಿ 'ಲೋಕತಂತ್ರ ಬಚಾವೋ ಮಶಾಲ್ ಮೆರವಣಿಗೆ' ನಡೆಯಲಿದೆ.
ಆಗಸ್ಟ್ 22ರಿಂದ ಸೆಪ್ಟೆಂಬರ್ 7ರವರೆಗೆ ರಾಜ್ಯ ಕೇಂದ್ರ ಕಚೇರಿಗಳಲ್ಲಿ 'ವೋಟ್ ಚೋರ್, ಗಡ್ಡಿ ಚೋರ್' ಱಲಿಗಳು ನಡೆಯಲಿದೆ. ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರವರೆಗೆ ಮತದಾನ ಹಕ್ಕು ರಕ್ಷಣೆಗೆ ದೇಶವ್ಯಾಪಿ ಸಹಿ ಅಭಿಯಾನ ನಡೆಯಲಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಎನ್‌ಎಸ್‌ಯುಐ ಉಸ್ತುವಾರಿ ಕನಯ್ಯಾ ಕುಮಾರ್ ಹೇಳಿದ್ದಾರೆ.
ಕಳೆದ ವಾರ, ರಾಹುಲ್ ಗಾಂಧಿ 2024ರ ಲೋಕಸಭಾ ಚುನಾವಣೆಯ ವೇಳೆ ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಹೆಚ್ಚು ಮತಗಳ ಕಳ್ಳತನ ನಡೆದಿದೆ ಎಂದು ಆರೋಪಿಸಿದ್ದರು. ಸದ್ಯ, ಸಂಸತ್ತಿನ ಉಭಯ ಸದನಗಳಲ್ಲಿ ವಿರೋಧ ಪಕ್ಷಗಳು ಈ ವಿಷಯದ ಮೇಲೆ ಚರ್ಚೆ ನಡೆಸುವಂತೆ ಒತ್ತಾಯಿಸುತ್ತಿದ್ದು, ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಚುನಾವಣಾ ಆಯೋಗವು ಮತದಾರರ ಹಕ್ಕು ಕಸಿಯುತ್ತಿವೆ ಎಂದು ಆರೋಪಿಸುತ್ತಿವೆ.
ಪಾಟ್ನಾದಲ್ಲಿ I.N.D.I ಕೂಟ ಸಮಾವೇಶ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ 'ಎಕ್ಸ್'ನಲ್ಲಿಈ ವಿಷಯ ಪ್ರಕಟಿಸಿದ್ದು, ಪ್ರಜಾಪ್ರಭುತ್ವ ರಕ್ಷಿಸುವ ಹೋರಾಟ ಬೀದಿಗಳಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ. ಆಗಸ್ಟ್ 17ರಿಂದ ಆರಂಭವಾಗುವ ಯಾತ್ರೆಯು ಸೆಪ್ಟೆಂಬರ್ 1ರಂದು ಪಟನಾದ ಗಾಂಧಿ ಮೈದಾನದಲ್ಲಿ ಬೃಹತ್ ಸಮಾವೇಶದೊಂದಿಗೆ ಮುಕ್ತಾಯಗೊಳ್ಳಲಿದೆ.ಸ್ವಾತಂತ್ರ್ಯ ದಿನಾಚರಣೆ ಮುನ್ನಾ ದಿನವಾದ ಆಗಸ್ಟ್ 14ರಂದು ಎಲ್ಲ ಜಿಲ್ಲಾಕೇಂದ್ರಗಳಲ್ಲಿ 'ಲೋಕತಂತ್ರ ಬಚಾವೊ' ಮೆರವಣಿಗೆ ನಡೆಯಲಿದೆ.ಮುಂಬರುವ ಬಿಹಾರ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟವು ಎಸ್‌ಐಆರ್ ಮತ್ತು ಮತಗಳ್ಳತನ ಅಸ್ತ್ರ ಮುಂದಿಟ್ಟುಕೊಂಡು ಆಡಳಿತಾರೂಢ ಎನ್‌ಡಿಎ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಲಿದೆ.




