ನವದೆಹಲಿ: ಸಿಂಧೂ ನದಿ ನೀರಿನ ಒಪ್ಪಂದವನ್ನು (Indus Waters Treaty) ಭಾರತ (India) ಸ್ಥಗಿತಗೊಳಿಸಿದ ನಿರ್ಧಾರಕ್ಕೆ ಸಂಬಂಧಿಸಿದಂತೆ ನೆರೆಯ ರಾಷ್ಟ್ರ ಪಾಕಿಸ್ತಾನ (Pakistan) ಪರಮಾಣು ಬೆದರಿಕೆ ಒಡ್ಡಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂತಹ ಬ್ಲ್ಯಾಕ್‌ಮೇಲ್‌ಗಳನ್ನು ಭಾರತ ಎಂದಿಗೂ ಸಹಿಸಲ್ಲ ಎಂದು ಪಾಕಿಸ್ತಾನಕ್ಕೆ ಸ್ಪಷ್ಟ ಹಾಗೂ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
79 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ ಮೋದಿ, ದೇಶವು ಜಲ ಒಪ್ಪಂದಕ್ಕೆ ಎಂದೂ ರಾಜಿಯಾಗಲ್ಲ ಎಂದು ಘೋಷಿಸಿದ್ದಾರೆ. ಸಿಂಧೂ ನದಿ ನೀರು ಒಪ್ಪಂದ ಭಾರತದ ಜನರಿಗೆ ಮಾಡಿದ ದೊಡ್ಡ ಅನ್ಯಾಯವಾಗಿತ್ತು. ನಮ್ಮದೇ ರೈತರು ನೀರಿಗಾಗಿ ಪರದಾಡುತ್ತಿದ್ದರೂ ಭಾರತದ ನದಿಗಳು ಶತ್ರು ದೇಶಕ್ಕೆ ನೀರಾವರಿ ಮಾಡುತ್ತಿತ್ತು. ಆದರೆ ಈಗ ಭಾರತದ ನೀರಿನ ಪಾಲಿನ ಮೇಲಿನ ಹಕ್ಕು ಕೇವಲ ಭಾರತ ಮತ್ತು ಅದರ ರೈತರಿಗೆ ಮಾತ್ರ ಸೇರಿದೆ. ರೈತರ ಹಿತಾಸಕ್ತಿ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳ ಬಗ್ಗೆ ರಾಜಿ ಮಾಡಿಕೊಳ್ಳುವುದು ನಮಗೆ ಇಷ್ಟವಿಲ್ಲ ಎಂದು ಅವರು ಹೇಳಿದ್ದಾರೆ.
1960 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಂಧೂ ನದಿ ನೀರು ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ವರ್ಷ ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಪಾಕಿಸ್ತಾನಿ ಭಯೋತ್ಪಾದಕರ ಗುಂಪು 26 ಅಮಾಯಕರ ಜೀವಗಳನ್ನು ಬಲಿತೆಗೆದುಕೊಂಡ ಬಳಿಕ ಭಾರತ ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಯಿತು. ಈ ಸಂದರ್ಭ ಭಾರತ ಸಿಂಧೂ ನದಿ ನೀರಿನ ಒಪ್ಪಂದವನ್ನು ಸ್ಥಗಿತಗೊಳಿಸಿತು. ಮಾತ್ರವಲ್ಲದೇ ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನಿ ಉಗ್ರರಿಗೆ ತಕ್ಕ ಪಾಠ ಕಲಿಸಿತು.
ಭಾರತ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ವಿರೋಧಿಸಿದ ಪಾಕಿಸ್ತಾನ ಇತ್ತೀಚೆಗೆ ಈ ಒಪ್ಪಂದವನ್ನು ಮತ್ತೆ ಸಾಮಾನ್ಯ ಕಾರ್ಯನಿರ್ವಹಣೆಯನ್ನು ಪುನರಾರಂಭಿಸುವಂತೆ ಭಾರತದ ಬಳಿ ಒತ್ತಾಯಿಸಿತು. ಈ ನಡುವೆ ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ಅತಿರೇಕಕ್ಕೆ ಹೋಗಿ, ಭಾರತ ಸಿಂಧೂ ಜಲ ಮಾರ್ಗಗಳಲ್ಲಿ ನಿರ್ಮಿಸುವ ಯಾವುದೇ ಮೂಲಸೌಕರ್ಯವನ್ನು ನಾಶಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಭಾರತದ ವಿರುದ್ಧ ಜಾಗತಿಕ ವೇದಿಕೆಯಲ್ಲಿ ನಾಲಿಗೆ ಹರಿಬಿಟ್ಟ ಆಸಿಮ್ ಮುನೀರ್, ಪಾಕಿಸ್ತಾನದಲ್ಲಿ ಕ್ಷಿಪಣಿಗಳ ಕೊರತೆಯಿಲ್ಲ. ಭವಿಷ್ಯದಲ್ಲಿ ಭಾರತದೊಂದಿಗೆ ಯುದ್ಧ ಆದರೆ, ನಾವು ಮುಳುಗುವ ಮುನ್ಸೂಚನೆ ಸಿಕ್ಕರೆ, ನಾವು ಅರ್ಧ ಜಗತ್ತನ್ನೇ ನಾಶಪಡಿಸಲು ಹೇಸುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ಮುನೀರ್ ಅವರ ಹೇಳಿಕೆಗೆ ಇಂದು ಪ್ರತ್ಯುತ್ತರ ನೀಡಿದ ಪ್ರಧಾನಿ, ಭಾರತ ಇನ್ನು ಮುಂದೆ ಪರಮಾಣು ಬ್ಲ್ಯಾಕ್‌ಮೇಲ್ ಅನ್ನು ಸಹಿಸುವುದಿಲ್ಲ. ಶತ್ರುಗಳು ಇನ್ನು ಮುಂದೆ ಯಾವುದೇ ದುಸ್ಸಾಹಸ ಮಾಡಲು ಧೈರ್ಯ ಮಾಡಿದರೆ, ಭಾರತೀಯ ಸಶಸ್ತ್ರ ಪಡೆಗಳು ಅವರಿಗೆ ಸೂಕ್ತ ಉತ್ತರವನ್ನು ನೀಡುತ್ತವೆ. ರಕ್ತ ಮತ್ತು ನೀರು ಎಂದೂ ಒಟ್ಟಿಗೆ ಹರಿಯುವುದಿಲ್ಲ ಎಂದು ಭಾರತ ಈಗಾಗಲೇ ನಿರ್ಧರಿಸಿದೆ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ.




