ನವದೆಹಲಿ: ಬಿಹಾರದ ಮತದಾರರ ಪರಿಷ್ಕೃತ ಪಟ್ಟಿಯನ್ನು ಚುನಾವಣಾ ಆಯೋಗವು ಬಿಡುಗಡೆಗೊಳಿಸಿ ಶನಿವಾರಕ್ಕೆ ಒಂಬತ್ತು ದಿನ ಪೂರ್ಣಗೊಂಡಿದೆ. ಆದರೆ, ಇದುವರೆಗೂ ಯಾವುದೇ ರಾಜಕೀಯ ಪಕ್ಷವು ಹೆಸರು ಸೇರ್ಪಡೆ ಅಥವಾ ತೆಗೆದು ಹಾಕುವ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಿಲ್ಲ.
ಈಗಾಗಲೇ ಪಟ್ಟಿಯಲ್ಲಿ ಹೊರಗುಳಿದಿದ್ದ ಮತದಾರರ ಹೆಸರು ಸೇರ್ಪಡೆ, ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 1ರವರೆಗೆ ರಾಜಕೀಯ ಪಕ್ಷಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಮತಪಟ್ಟಿಗೆ ಆಕ್ಷೇಪಣೆ ಸಲ್ಲಿಸುವ ಕುರಿತು ಆಗಸ್ಟ್ 1ರಿಂದ 9ರವರೆಗೆ ಯಾವುದೇ ರಾಜಕೀಯ ಪಕ್ಷಗಳು ಕೂಡ ಬೂತ್ ಮಟ್ಟದ ಏಜೆಂಟ್‌ಗಳನ್ನು ನೇಮಿಸಿರಲಿಲ್ಲ. ಇದೇ ವೇಳೆ 7,252 ಮಂದಿ ತಮ್ಮ ಹೆಸರು ಸೇರ್ಪಡೆ ಹಾಗೂ ತೆಗೆದುಹಾಕುವ ಸಂಬಂಧ ಆಯೋಗವನ್ನು ಸಂಪರ್ಕಿಸಿದ್ದಾರೆ ಎಂದು ತಿಳಿಸಿದೆ.
'ಅರ್ಹ ಮತದಾರರು ಯಾವುದೇ ಕಾರಣಕ್ಕೂ ಬಿಟ್ಟು ಹೋಗಬಾರದು ಹಾಗೂ ಅನರ್ಹ ಮತದಾರರನ್ನು ಅಂತಿಮ ಪಟ್ಟಿಯಲ್ಲಿ ಯಾವುದೇ ಕಾರಣಕ್ಕೂ ಸೇರಿಸಿಕೊಳ್ಳುವುದಿಲ್ಲ ಎಂದು ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ. ಹೀಗಾಗಿ, ಯಾವುದೇ ಆಕ್ಷೇಪಣೆ, ತಪ್ಪುಗಳು ಇದ್ದರೆ ದೂರು ಸಲ್ಲಿಸಿ, ಸರಿಪಡಿಸಿಕೊಳ್ಳಬಹುದು' ಎಂದು ಆಯೋಗದ ಅಧಿಕಾರಿಯೊಬ್ಬರು ತಿಳಿಸಿದರು.
ಸೆಪ್ಟೆಂಬರ್ 30ರಂದು ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ಆಯೋಗವು ಈಗಾಗಲೇ ತಿಳಿಸಿದೆ.




