ಲಖನೌ: ಠಾಕೂರ್ ಸಮುದಾಯಕ್ಕೆ ಸೇರಿದ ಬಿಜೆಪಿಯ ಶಾಸಕರು ಸಭೆ ಸೇರಿ, 'ಕುಟುಂಬ ಪರಿವಾರ' ಎಂಬ ವಾಟ್ಸ್‌ಆಯಪ್ ಗುಂಪು ರಚಿಸಿರುವುದು ಉತ್ತರ ಪ್ರದೇಶದ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಕೆಲ ದಿನಗಳ ಹಿಂದೆ ನಡೆದ ಸಭೆಯಲ್ಲಿ ಸಮಾಜವಾದಿ ಪಕ್ಷದ ಬಂಡಾಯ ಶಾಸಕರಾದ ರಾಕೇಶ್ ಪ್ರತಾಪ್ ಸಿಂಗ್ ಮತ್ತು ಅಭಯ್ ಸಿಂಗ್ ಹಾಗೂ ಬಿಎಸ್‌ಪಿಯ ಉಮಾ ಶಂಕರ್ ಸಿಂಗ್ ಅವರು ಪಾಲ್ಗೊಂಡಿದ್ದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿ ಶಾಸಕರಾದ ಠಾಕೂರ್ ರಾಮವೀರ್ ಸಿಂಗ್ ಮತ್ತು ಜೈಪಾಲ್ ಸಿಂಗ್ ಅವರು ಸಭೆ ಆಯೋಜಿಸಿದ್ದರು. ಉತ್ತರ ಪ್ರದೇಶ ವಿಧಾಸಭೆಯಲ್ಲಿ ಠಾಕೂರ್ ಸಮುದಾಯದ 40 ಶಾಸಕರಿದ್ದು, ಅಷ್ಟೂ ಜನರೂ ಸಭೆಯಲ್ಲಿ ಭಾಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಮಾತುಕತೆ ಮತ್ತು ಅಭಿಪ್ರಾಯ ವಿನಿಮಯಕ್ಕಾಗಿ ವಾಟ್ಸ್‌ಆಯಪ್ ಗುಂಪನ್ನೂ ರಚಿಸಲಾಗಿದೆ ಎಂದು ಅವು ತಿಳಿಸಿವೆ.
ಸಭೆಯಲ್ಲಿ ಭಾಗಿಯಾಗಿದ್ದ ಶಾಸಕರೊಬ್ಬರು, 'ಇದೊಂದು ಔತಣಕೂಟವಾಗಿದ್ದರೂ, ರಾಜಕೀಯವಾಗಿಯೂ ಮಹತ್ವವನ್ನು ಪಡೆದಿದೆ' ಎಂದು ಹೇಳಿದರು. '
2024ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯು ಠಾಕೂರ್ ಸಮುದಾಯದ ಹಲವು ನಾಯಕರಿಗೆ ಟಿಕೆಟ್ ನಿರಾಕರಿಸಿ ಇತರೆ ಜಾತಿಯ ನಾಯಕರಿಗೆ ಟಿಕೆಟ್ ನೀಡಿತ್ತು. ಠಾಕೂರ್ ಸಮುದಾಯದ ಸದಸ್ಯರು ಈ ಬಗ್ಗೆ ಹಲವು ಬಾರಿ ಸಭೆ ಕರೆದು ಅಸಮಾಧಾನ ಹೊರಹಾಕಿದ್ದರು. ಸಮುದಾಯದ ಹಿತಾಸಕ್ತಿ ರಕ್ಷಣೆಗಾಗಿ ಒತ್ತಡ ತರುವ ಉದ್ದೇಶದಿಂದ ಈ ಬಾರಿ ಸಭೆ ಕರೆದು ವಾಟ್ಸ್‌ಆಯಪ್ ಗುಂಪು ರಚಿಸಲಾಗಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

