ನವದೆಹಲಿ: ಭಾರತದ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಶೇಕಡ 50ರಷ್ಟು ಹೆಚ್ಚುವರಿ ಸುಂಕ ಜಾರಿಗೆ ಬಂದ ಕೆಲವೇ ಗಂಟೆಗಳಲ್ಲಿ, ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ ಎಂದು ಉಭಯ ದೇಶಗಳು ಹೇಳಿಕೆ ನೀಡಿವೆ.
ಪರಸ್ಪರ ಮಾತುಕತೆಯ ಮಾರ್ಗ ಇನ್ನೂ ಮುಕ್ತವಾಗಿದೆ ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ.
"ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಹಾಗೂ ಅಮೆರಿಕ ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿದ್ದು, ಉಭಯ ದೇಶಗಳು ಒಂದು ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ" ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಇದಾದ ಕೆಲವೇ ಕ್ಷಣಗಳಲ್ಲಿ ಸರ್ಕಾರಿ ಅಧಿಕಾರಿಗಳು ಹೇಳಿಕೆ ನೀಡಿ, ಭಾರತ ಹಾಗೂ ಅಮೆರಿಕ ಧೀರ್ಘಾವಧಿ ಸಂಬಂಧವನ್ನು ಹೊಂದಿವೆ ಮತ್ತು ಈ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಬಯಸಿವೆ ಎಂದು ಹೇಳಿದ್ದಾರೆ. "ಉಭಯ ದೇಶಗಳು ಹೇಗೆ ಮುಂದುವರಿಯಬೇಕು ಎಂಬ ಬಗ್ಗೆ ಚಿಂತನೆ ನಡೆಸಿದ್ದು, ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲಿವೆ. ಸಂವಹನ ವಾಹಿನಿಗಳು ಮುಕ್ತವಾಗಿವೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಪ್ಪಂದ ಮಾತುಕತೆ ಮುರಿದು ಬೀಳಲು ಭಾರತ ರಷ್ಯಾದಿಂದ ಕಚ್ಚಾ ತೈಲ ಖರೀದಿ ಮಾಡುತ್ತಿರುವುದೇ ಪ್ರಮುಖ ಕಾರಣ ಎಂದು ಬೆಸೆಂಟ್ ದೂರಿದ್ದಾರೆ. ಜತೆಗೆ ಭಾರತ ಪ್ರಸ್ತಾಪಿಸಿರುವ ಅಂಶಗಳು ಕೇವಲ ಪ್ರದರ್ಶನಾತ್ಮಕ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಭಾರತದ ವಿರುದ್ಧ ಯೂರೋಪಿಯನ್ ಒಕ್ಕೂಟ ಕೂಡಾ ಅಮೆರಿಕದ ರೀತಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.




