ಕಾಸರಗೋಡು: ತನ್ನ ಹದಿಹರೆಯದಲ್ಲಿ ಮಾದಕ ದ್ರವ್ಯದ ವ್ಯಸನಕ್ಕೆ ಬಲಿಯಾಗಿ, ನಂತರ ಈ ಪಿಡುಗಿನಿಂದ ಹೊರಬಂದಿರುವ ಯುವಕ ಮಹಮ್ಮದ್ ಸ್ವಾಲಿಹ್ ಪ್ರಸಕ್ತ ಡ್ರಗ್ಸ್ ವಿರುದ್ಧ ಅಭಿಯಾನದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಕಾಸರಗೋಡಿನಿಂದ ತಿರುವನಂತಪುರ ವರೆಗೆ ಕಾಲ್ನಡೆ ಜಾಥಾ ಹಮ್ಮಿಕೊಂಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಮಹಮ್ಮದ್ ಸ್ವಾಲಿಹ್ ಮಾಹಿತಿ ನೀಡಿದ್ದಾರೆ.
2013ರಿಂದ 2019ರ ವರೆಗೂ ತಾನು ಸ್ವತ: ಒಬ್ಬ ಡ್ರಗ್ ವ್ಯಸನಿಯಾಗಿದ್ದು, ಮಾದಕವಸ್ತು ಸೇವನೆಯಿಂದ ಹೆತ್ತವರಿಗೆ ಥಳಿಸಿದ, ಮಾದಕ ವಸ್ತುವಿಗಾಗಿ ಕಳವಿಗಿಳಿದು ಜೈಲು ಪಾಲಾಗಿದ್ದೆ. ಕಾರಾಗೃಹದಲ್ಲಿ ನಡೆದ ಆಪ್ತ ಸಮಾಲೋಚನೆಯಲ್ಲಿ ಮಾದಕದ್ರವ್ಯದ ವಿರುದ್ಧ ಕಾರ್ಯಾಚರಿಸಲು ತೀರ್ಮಾನಿಸಿದ್ದೇನೆ. ನಂತರ ವಿವಿಧ ಸಂಘಟನೆಗಳು ಮಾದಕ ದ್ರವ್ಯದ ವಿರುದ್ಧ ನಡೆಸುತ್ತಿದ್ದ ಅಭಿಯಾನದಿಂದ ಮಾದಕ ವಸ್ತುಗಳಿಂದ ದೂರ ಉಳಿಯಲು ನಿರ್ಧರಿಸಿದ್ದೆ. 2020ರಿಂದ ತಾನೂ ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ತನಗೆ ಸರ್ಕಾರಿ ಸ್ವಯಂಸೇವಾ ಸಂಸ್ಥೆಗಳು, ಅಬಕಾರಿ ಇಲಾಖೆಯೂ ಸಹಕಾರ ನೀಡುತ್ತಿದೆ. 13ರಿಂದ 23ರ ಹರೆಯದವರು ಹೆಚ್ಚಾಗಿ ಈ ಮಾದಕ ವಸ್ತುವಿನ ವ್ಯಸನಕ್ಕೆ ಬಲಿಬೀಳುತ್ತಿದ್ದು, ಇವರನ್ನು ಪಾರುಮಾಡಲು ಅಭಿಯಾನಕ್ಕೆ ನೇತೃತ್ವ ನೀಡುತ್ತಿದ್ದೇನೆ. 2019ರಿಂದ ತಾನು 60ಕ್ಕೂ ಹೆಚ್ಚು ಮಂದಿಯನ್ನು ಮಾದಕ ವ್ಯಸನದಿಂದ ವಿಮುಖರಾಗುವಂತೆ ಮಾಡಿದ್ದೇನೆ. ಪ್ರಸಕ್ತ ಕಾಸರಗೋಡಿನಿಂದ ತಿರುವನಂತಪುರ ವರೆಗೆ ಮಾದಕ ವ್ಯಸನದ ವಿರುದ್ಧ ಅಭಿಯಾನ ಹಮ್ಮಿಕೊಳ್ಳಲಾಗುವುದು. ಪ್ರತಿ ಜಿಲ್ಲೆಯಲ್ಲಿ ನಿಗದಿತ ಗ್ರಾಮಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ಕಾಲ್ನಡಿಗೆ ಮೂಲಕ ತೆರಳಿ ಜಾಗೃತಿ ಹಮ್ಮಿಕೊಳ್ಳಲಾಗುವುದು. ಆ. 27ರಂದು ಬೆಳಗ್ಗೆ ಕಾಸರಗೋಡು ನಗರ ಠಾಣೆ ವಠಾರದಿಂದ ಕಾಲ್ನಡಿಗೆ ಜಾಥಾ ಆರಂಭಿಸಲಾಗುವುದು. ಸುಮಾರು ಮೂರು ತಿಂಗಳ ಕಾಲ ರಾಜ್ಯದ ವಿವಿಧೆಡೆ ಸಂಚರಿಸಿ ತಿರುವನಂತಪುರದಲ್ಲಿ ಜಾಥಾ ಸಂಪನ್ನಗೊಳ್ಳಲಿರುವುದಾಗಿ ತಿಳಿಸಿದರು.

