ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನಮ್ ಶ್ರೀ ಎಡನೀರು ಮಠದಲ್ಲಿ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ಪಂಚಮ ಚಾತುರ್ಮಾಸ್ಯ ವ್ರತಾಚರಣೆಯು ಭಕ್ತಿಭಾವಗಳೊಂದಿಗೆ ಸಂಭ್ರಮದಿಂದ ಜರಗುತ್ತಿದ್ದು, ಭಾನುವಾರ ಚಾತುರ್ಮಾಸ್ಯ ವ್ರತಾಚರಣೆ ಮಾನ್ಯ ವಲಯ ಸಮಿತಿಯ ನೇತೃತ್ವದಲ್ಲಿ ಒಂದು ದಿನದ ಸೇವೆ ಜರಗಿತು.
ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದಿಂದ ಬೆಳಗ್ಗೆ ಪ್ರಾರ್ಥನೆಯನ್ನು ನಡೆಸಿ ಹಸಿರುವಾಣಿ ಮೆರವಣಿಗೆ ಆರಂಭವಾಯಿತು. ಮಾನ್ಯ ಶ್ರೀ ಅಯ್ಯಪ್ಪ ಮಂದಿರ, ಶಾರದಾ ಭಜನಾ ಮಂದಿರ ಕೊಲ್ಲಂಗಾನ, ಶ್ರೀ ರಕ್ತೇಶ್ವರಿ ನಾಗ ಗುಳಿಗ ಸನ್ನಿಧಿ ಅರ್ತಲೆ, ಶ್ರೀ ಅಯ್ಯಪ್ಪ ಭಜನಾ ಮಂದಿರ ಚುಕ್ಕಿನಡ್ಕ, ಶ್ರೀ ಅಯ್ಯಪ್ಪ ಭಜನ ಮಂದಿರ ಪಜ್ಜ, ಮಾನ್ಯ ಶ್ರೀ ವೆಂಕಟ್ರಮಣ ದೇವಸ್ಥಾನ ಹಾಗೂ ಊರಿನ ಸಂಘಸಂಸ್ಥೆಗಳ ಸಹಕಾರದೊಂದಿಗೆ ಹಸಿರುವಾಣಿ ಮೆರವಣಿಗೆ ನಡೆಯಿತು.
ವಲಯ ಸಮಿತಿಯ ಪರವಾಗಿ ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಗೋಪಾಲ ಭಟ್ ಪಟ್ಟಾಜೆ, ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ಗುರುಸ್ವಾಮಿ ರಾಮ ಕಾರ್ಮಾರು ಪಾದಪೂಜೆಯನ್ನು ನೆರವೇರಿಸಿದರು. ವಲಯ ಸಮಿತಿಯ ಪರವಾಗಿ ಸುಬ್ರಹ್ಮಣ್ಯ ಭಟ್ ಪುದುಕೋಳಿ ಶ್ರೀಗುರುಗಳಿಗೆ ಭಿಕ್ಷಾಸೇವಾ ಸಂಕಲ್ಪದಲ್ಲಿ ಪಾಲ್ಗೊಂಡರು. ವೃಂದಾವನ ಬಾಲಗೋಕುಲ ಮಾನ್ಯ ಇದರ ಮಕ್ಕಳಿಂದ ಕುಣಿತ ಭಜನೆ ನಡೆಯಿತು. ಪಾಲ್ಗೊಂಡ ಭಗವದ್ಭಕ್ತರಿಗೆ ಶ್ರೀಗಳು ಆಶೀರ್ವಾದ ಮಂತ್ರಾಕ್ಷತೆಯನ್ನಿತ್ತು ಹರಸಿದರು.

.jpg)
