ಜಮ್ಮು: 'ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನಕ್ಕೆ ಗಡಿಪಾರು ಮಾಡಲಾದ ಪಾಕಿಸ್ತಾನದ ರಕ್ಷಂದಾ ರಾಶಿದ್ ಅವರಿಗೆ ಸಂದರ್ಶಕ ವೀಸಾ ನೀಡಲು ನಿರ್ಧರಿಸಲಾಗಿದೆ' ಎಂದು ಜಮ್ಮು ಮತ್ತು ಕಾಶ್ಮೀರ-ಲಡಾಖ್ ಹೈಕೋರ್ಟ್‌ಗೆ ಕೇಂದ್ರ ಗೃಹ ಸಚಿವಾಲಯವು ಮಾಹಿತಿ ನೀಡಿದೆ.
ಈ ಹಿನ್ನೆಲೆಯಲ್ಲಿ ಮರಳಿ ಭಾರತಕ್ಕೆ ಬರಲು ಅವಕಾಶ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ರಾಶಿದ್ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಪಾಕಿಸ್ತಾನದ ನಿವಾಸಿಯಾಗಿದ್ದ ರಕ್ಷಂದಾ (62) ಜಮ್ಮುವಿನ ಶೇಖ್ ಝಹೂರ್ ಅಹ್ಮದ್ ಅವರನ್ನು 35 ವರ್ಷಗಳ ಹಿಂದೆ ಮದುವೆಯಾಗಿದ್ದರು. ಪಹಲ್ಗಾಮ್ ದಾಳಿಯ ಬಳಿಕ ಸಂದರ್ಶಕ ವೀಸಾದ ಮೇಲೆ ಬಂದಿದ್ದ ರಕ್ಷಂದಾ ಸೇರಿದಂತೆ ಪಾಕಿಸ್ತಾನದ ಹಲವು ನಾಗರಿಕರನ್ನು ಭಾರತವು ಗಡಿಪಾರು ಮಾಡಿತ್ತು.




