ಮಂಜೇಶ್ವರ: ಪ್ರತಿ ಗ್ರಾಮ ಪಂಚಾಯತಿಗಳು ಆಟದ ಮೈದಾನ ಹೊಂದಿರುವುದು ರಾಜ್ಯದ ಕ್ರೀಡಾ ನೀತಿಯ ಭಾಗವಾಗಿದ್ದು, ಮಂಜೇಶ್ವರ ಕ್ಷೇತ್ರದಲ್ಲಿ ಮಾತ್ರ ಐದು ಕೋಟಿ ರೂ. ವೆಚ್ಚದ ಕ್ರೀಡಾ ಯೋಜನೆಗಳು ಪ್ರಗತಿಯಲ್ಲಿವೆ ಎಂದು ಕ್ರೀಡೆ, ವಕ್ಫ್ ಮತ್ತು ಹಜ್ ಯಾತ್ರೆ ಸಚಿವ ವಿ. ಅಬ್ದುರಹ್ಮಾನ್ ಹೇಳಿದರು.
ಒಂದು ಗ್ರಾಮ ಪಂಚಾಯತಿಯಲ್ಲಿ ಒಂದು ಆಟದ ಮೈದಾನ ಯೋಜನೆಯ ಭಾಗವಾಗಿ ಮಂಜೇಶ್ವರ ಗ್ರಾಮ ಪಂಚಾಯತಿಯಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಆಟದ ಮೈದಾನ ಕಾಮಗಾರಿಗೆ ಗುರುವಾರ ಶಂಕುಸ್ಥಾಪನೆ ನಿರ್ವಹಿಸಿ ಸಚಿವರು ಮಾತನಾಡುತ್ತಿದ್ದರು.
ಹಿಂದೆ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಕಾಸರಗೋಡು ಎದುರಿಸಿದ ನಿರ್ಲಕ್ಷ್ಯವನ್ನು ಹಿಮ್ಮೆಟ್ಟಿಸಲಾಗಿದೆ ಮತ್ತು ತ್ರಿಕರಿಪುರ ಕ್ರೀಡಾಂಗಣ ಮತ್ತು ನೀಲೇಶ್ವರ ಕ್ರೀಡಾ ಸಂಕೀರ್ಣದ ನಿರ್ಮಾಣವು ಇದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ಮಂಜೇಶ್ವರ ಕ್ಷೇತ್ರದಲ್ಲಿ ಮಾತ್ರ ಐದು ಕೋಟಿ ಮೌಲ್ಯದ ಕ್ರೀಡಾ ಯೋಜನೆಗಳು ಪ್ರಗತಿಯಲ್ಲಿವೆ. ಮಂಜೇಶ್ವರ ಪಂಚಾಯತಿ ಆಟದ ಮೈದಾನ ಯೋಜನೆಗೆ 1 ಕೋಟಿ ರೂ., ಶಾಸಕರ ಆಸ್ತಿ ಅಭಿವೃದ್ಧಿ ನಿಧಿಯಿಂದ 50 ಲಕ್ಷ ರೂ. ಮತ್ತು ಕ್ರೀಡಾ ಇಲಾಖೆ ನಿಧಿಯಿಂದ 50 ಲಕ್ಷ ರೂ. ನೀಡಲಾಗಿದೆ. ರಾಜ್ಯಾದ್ಯಂತ ಕ್ರೀಡಾ ಕ್ಷೇತ್ರದಲ್ಲಿ 356 ನಿರ್ಮಾಣ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ಸಚಿವರು ಈ ಸಂದರ್ಭ ಹೇಳಿದರು.
ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ಕೇರಳ ಪ್ರತಿಷ್ಠಾನದ ಕಾರ್ಯನಿರ್ವಾಹಕ ಎಂಜಿನಿಯರ್ ಎ.ಪಿ.ಎಂ. ಮುಹಮ್ಮದ್ ಅಶ್ರಫ್ ಸಮಾರಂಭದಲ್ಲಿ ವರದಿ ಮಂಡಿಸಿದರು. ಮಂಜೇಶ್ವರ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮುಹಮ್ಮದ್ ಸಿದ್ದಿಕ್, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯೆ ಶಂಶೀನಾ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ರಾಧಾ, ಕಲ್ಯಾಣ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಯಾದವ ಬಡಾಜೆ, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್. ಜಯಾನಂದ, ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಹನೀಫ್ ಪಡಿಂಞರ್, ಅಜೀಜ್ ಹಾಜಿ, ಹರಿಶ್ಚಂದ್ರ ಮಂಜೇಶ್ವರ, ಆರ್.ಕೆ. ಶ್ರೀಧರ, ಇಬ್ರಾಹಿಂ ತೋಕೆ, ಎಂ. ಅಬ್ದುಲ್ ಹಮೀದ್, ಗಣಪತಿ ಪೈ, ವಿ. ಶ್ರೀವಲ್ಸ್ ಉಪಸ್ಥಿತರಿದ್ದರು. ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವಿನಾ ಮೊಂತೆರೊ ಸ್ವಾಗತಿಸಿ, ಜಿಲ್ಲಾ ಪಂಚಾಯತಿ ಸದಸ್ಯ ಗೋಲ್ಡನ್ ಅಬ್ದುಲ್ ರಹಿಮಾನ್ ವಂದಿಸಿದರು.

.jpeg)
.jpeg)
