HEALTH TIPS

ಮತ ಕಳ್ಳತನ ಸಾಬೀತು ಪಡಿಸುವ 'ಆಟಂ ಬಾಂಬ್‌' ಇದೆ: ರಾಹುಲ್ ಗಾಂಧಿ

ನವದೆಹಲಿಲ: ಆಡಳಿತಾರೂಢ ಬಿಜೆಪಿಯ 'ಮತಕಳ್ಳತನ' ಕೃತ್ಯಕ್ಕೆ ಚುನಾವಣಾ ಆಯೋಗವು ನೆರವಾಗಿದೆ ಎಂದು ಶುಕ್ರವಾರ ಪುನರುಚ್ಚರಿಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಈ ಆರೋಪವನ್ನು ಸಾಬೀತು ಪಡಿಸಲು ತಮ್ಮ ಬಳಿ 'ಆಟಂ ಬಾಂಬ್‌' ಇದೆ ಎಂದು ಹೇಳಿದರು.

ಈ ಕುರಿತು ಕಾಂಗ್ರೆಸ್‌ ಸಂಗ್ರಹಿಸಿರುವ ದಾಖಲೆ ಮತ್ತು ಪುರಾವೆಗಳನ್ನು ಅವರು 'ಆಟಂ ಬಾಂಬ್‌'ಗೆ ಹೋಲಿಕೆ ಮಾಡಿ ಮಾತನಾಡಿದರು.

'ನಮ್ಮ ಬಳಿ ಇರುವ ಈ ಆಟಂ ಬಾಂಬ್‌ ಸ್ಪೋಟಿಸಿದಾಗ ಚುನಾವಣಾ ಆಯೋಗದವರಿಗೆ ತಪ್ಪಿಸಿಕೊಳ್ಳಲು ದೇಶದಲ್ಲಿ ಜಾಗವೇ ಇರುವುದಿಲ್ಲ' ಎಂದು ಅವರು ವ್ಯಂಗ್ಯವಾಡಿದರು.

ಬಿಹಾರ ಮತ್ತು ಇತರ ರಾಜ್ಯಗಳಲ್ಲಿನ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ವಿರುದ್ಧ 'ಇಂಡಿಯಾ' ಮೈತ್ರಿಕೂಟದ ಪಕ್ಷಗಳು ಶುಕ್ರವಾರವೂ ಸಂಸತ್ತಿನ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸಿದವು.

ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ರಾಹುಲ್‌, 'ಮತ ಕಳ್ಳತನದಲ್ಲಿ ತೊಡಗಿಸಿಕೊಳ್ಳುವ ಮೂಲಕ ದೇಶದ್ರೊಹ ಕೆಲಸ ಮಾಡಿರುವ ಚುನಾವಣಾ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಅವರು ಎಷ್ಟೇ ಹಿರಿಯ ಅಥವಾ ಕಿರಿಯ ಅಧಿಕಾರಿಯಾದರೂ ಬಿಡುವುದಿಲ್ಲ. ಅವರು ಸೇವೆಯಲ್ಲಿರಲಿ ಅಥವಾ ನಿವೃತ್ತರಾಗಿರಲಿ, ಗುರುತಿಸಿ ಕ್ರಮ ಕೈಗೊಳ್ಳುತ್ತೇವೆ' ಎಂದು ಎಚ್ಚರಿಸಿದರು.

ಶೇ100ರಷ್ಟು ಪುರಾವೆಯಿದೆ:

'ಮತ ಕಳ್ಳತನ ನಡೆಯುತ್ತಿದೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಚುನಾವಣಾ ಆಯೋಗವೇ ಇದರಲ್ಲಿ ಭಾಗಿ ಆಗಿರುವುದಕ್ಕೆ ನನ್ನ ಬಳಿ ಸ್ಪಷ್ಟವಾದ ಪುರಾವೆಗಳಿವೆ. ಅತ್ಯಂತ ಜವಾಬ್ದಾರಿಯಿಂದ ಇದನ್ನು ಹೇಳುತ್ತಿದ್ದೇನೆ. ಶೇ 100ರಷ್ಟು ಪುರಾವೆಗಳಿವೆ' ಎಂದು ರಾಹುಲ್‌ ಹೇಳಿದರು.

'ಈ ದಾಖಲೆಗಳನ್ನು ನಾನು ಬಿಡುಗಡೆ ಮಾಡಿದ ಕೂಡಲೇ ಎಲ್ಲವೂ ಸ್ಪಷ್ಟವಾಗಿ ದೇಶದ ಜನರಿಗೆ ಗೊತ್ತಾಗುತ್ತದೆ. ಆಯೋಗ ಯಾರಿಗಾಗಿ ಈ ಕೃತ್ಯದಲ್ಲಿ ತೊಡಗಿದೆ? ಬಿಜೆಪಿಗಾಗಿ ಎಂಬುದು ಇದರಿಂದ ತಿಳಿಯುತ್ತದೆ. ಈ ಬಗ್ಗೆ ಯಾವುದೇ ಅನುಮಾನ ಇಲ್ಲ. ಎಲ್ಲವೂ ಮುಕ್ತ ಮತ್ತು ಸ್ಪಷ್ಟವಾಗಿದೆ' ಎಂದು ಅವರು ತಿಳಿಸಿದರು.

'ಲೋಕಸಭಾ ಚುನಾವಣೆ ವೇಳೆ ಮಧ್ಯಪ್ರವೇಶದಲ್ಲಿ ಅಕ್ರಮ ನಡೆದ ಬಗ್ಗೆ ಅನುಮಾನಗಳು ಮೂಡಿದ್ದವು. ಮಹಾರಾಷ್ಟ್ರದಲ್ಲಿ ಈ ಅನುಮಾನ ಗಟ್ಟಿಯಾಯಿತು. ಅಲ್ಲಿ ಮತದಾರರ ಪಟ್ಟಿಯಲ್ಲಿ ಒಂದು ಕೋಟಿ ಮತದಾರರು ಸೇರಿದ್ದರು. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು, ಇನ್ನಷ್ಟು ಆಳವಾಗಿ ಸಂಶೋಧನೆಗೆ ಇಳಿದೆವು. ಅದಕ್ಕೆ ಆರು ತಿಂಗಳೇ ಹಿಡಿಯಿತು. ಅಲ್ಲಿ ದೊರೆತಿರುವ ಪುರಾವೆಗಳು ನಿಜವಾಗಿಯೂ 'ಆಟಂ ಬಾಂಬ್‌'ನಂತಿದೆ. ಅದು ಸ್ಪೋಟಿಸಿದರೆ, ಆಯೋಗ ಅದನ್ನು ಮುಚ್ಚಿಡಲು ಸಾಧ್ಯವೇ ಇಲ್ಲ' ಎಂದು ಹೇಳಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಸಾಕಷ್ಟು ಮತಕಳ್ಳತನ ಆಗಿದೆ. ಈ ಬಗ್ಗೆ ಶೇ 100ರಷ್ಟು ಪುರಾವೆ ಲಭ್ಯವಿದ್ದು, ಆಯೋಗದ ಬಳಿ ಬರುತ್ತೇವೆ ಎಂದು ರಾಹುಲ್ ಎಚ್ಚರಿಸಿದರು.

ನೀರಿನಂತೆ ಹರಿಯಿರಿ- ಬಿಜೆಪಿ

ನವದೆಹಲಿ: ರಾಹುಲ್‌ ಗಾಂಧಿ ಅವರು ಚುನಾವಣಾ ಆಯೋಗದ ಮೇಲೆ ಪ್ರಜಾಪ್ರಭುತ್ವ ವಿರೋಧಿ ಮತ್ತು ಅಗೌರವದ ಭಾಷೆಯನ್ನು ಬಳಸಿದ್ದಾರೆ ಎಂದು ಟೀಕಿಸಿರುವ ಬಿಜೆಪಿ 'ನೀವು ಬಾಂಬಿನಂತೆ ಸ್ಪೋಟಿಸಬೇಡಿ ನೀರಿನಂತೆ ಹರಿಯಿರಿ' ಎಂದು ಹೇಳಿದೆ. 'ಪ್ರಜಾಪ್ರಭುತ್ವದ ಮೇಲೆ ನಾವು ನಂಬಿಕೆ ಇಟ್ಟಿದ್ದೇವೆ. ನೀವು ಆಟಂ ಬಾಂಬ್‌ ಸ್ಪೋಟಿಸಿದರೆ ನಾವು ಸಂವಿಧಾನವನ್ನು ರಕ್ಷಿಸುತ್ತೇವೆ' ಎಂದು ಬಿಜೆಪಿ ನಾಯಕ ಸಂಬಿತ್‌ ಪಾತ್ರ ತಿಳಿಸಿದರು. 'ವಿರೋಧ ಪಕ್ಷಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ. ಹೀಗಾಗಿ ಅವರು ಬಾಂಬ್‌ ಸ್ಪೋಟಿಸುವುದಾಗಿ ಹೇಳುತ್ತಿದ್ದಾರೆ' ಎಂದು ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಬೇಜವಾಬ್ದಾರಿ ಹೇಳಿಕೆಗಳನ್ನು ನಿರ್ಲಕ್ಷಿಸಿ

ನವದೆಹಲಿ: ರಾಹುಲ್‌ ಅವರ ಆರೋಪಗಳನ್ನು ಆಧಾರರಹಿತ ಎಂದು ಕರೆದಿರುವ ಚುನಾವಣಾ ಆಯೋಗ ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನಿರ್ಲಕ್ಷಿಸಿ ಎಂದು ತನ್ನ ಅಧಿಕಾರಿಗಳಿಗೆ ತಿಳಿಸಿದೆ. 'ನಿತ್ಯ ಹೀಗೆ ಆಧಾರರಹಿತವಾಗಿ ಬೆದರಿಸುತ್ತಿರುವವರನ್ನು ನಿರ್ಲಕ್ಷಿಸುವುದೇ ಸೂಕ್ತ. ಪಾರದರ್ಶಕ ಮತ್ತು ನ್ಯಾಯಯುತವಾಗಿ ಕೆಲಸ ಮಾಡುತ್ತಿರುವ ಆಯೋಗದ ಸಿಬ್ಬಂದಿ ಇಂತಹ ಹೇಳಿಕೆಗಳಿಗೆಲ್ಲ ಗಮನ ಕೊಡಬಾರದು' ಎಂದು ಅದು ಅಧಿಕಾರಿ ಮತ್ತು ಸಿಬ್ಬಂದಿಗೆ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries