ಕುಂಬಳೆ: ಸ್ಕೂಟರ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದ ಪರಿಣಾಮ ವಿದ್ಯಾರ್ಥಿಯೊಬ್ಬ ದುರಂತ ಸಾವನ್ನಪ್ಪಿದ್ದ ಘಟನೆ ಕುಂಬಳೆಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿ ಯೂಸುಫ್ (18) ಬಂದ್ಯೋಡು ಸಮೀಪದ ಇಚ್ಲಂಗೋಡು ದಿನಾರ್ ನಗರದ ನಿವಾಸಿ ಮುಹಮ್ಮದ್ ತ್ಯೆವಳಪ್ಪು ಮತ್ತು ಖೈರುನ್ನೀಸಾ ದಂಪತಿಯ ಪುತ್ರ.
ಶಿರಿಯಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ ಟು ವಿದ್ಯಾರ್ಥಿ. ಶುಕ್ರವಾರ ರಾತ್ರಿ ಈ ಅಪಘಾತ ಸಂಭವಿಸಿದೆ. ಸ್ನೇಹಿತರನ್ನು ಭೇಟಿ ಮಾಡಿ ಮಾವಿನಕಟ್ಟೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಯೂಸುಫ್ ಸವಾರಿ ಮಾಡುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆ ಮಧ್ಯದಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಉರುಳಿದೆ. ಡಿಕ್ಕಿಯ ಪರಿಣಾಮ ಯೂಸುಫ್ ತಲೆಗೆ ಗಂಭೀರ ಗಾಯವಾಗಿದೆ. ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ಆತನ ಜೀವ ಉಳಿಸಲಾಗಲಿಲ್ಲ. ನಂತರ, ಕುಂಬಳೆ ಪೊಲೀಸರು ಸ್ಥಳಕ್ಕೆ ತಲುಪಿ ವಿಚಾರಣೆ ಪೂರ್ಣಗೊಳಿಸಿದರು. ಮೃತ ಬಾಲಕ ಸಹೋದರ ಸಹೋದರಿಯರಾದ ಸಿದ್ದಿಕ್, ಸಫ್ರಿನಾ ಅವರನ್ನು ಅಗಲಿದ್ದಾನೆ.




