ಕಾಸರಗೋಡು: ವಿಶ್ವ ಸ್ತನ್ಯಪಾನ ಸಪ್ತಾಹದ ಜಿಲ್ಲಾ ಮಟ್ಟದ ಉದ್ಘಾಟನೆ ಕಾಞಂಗಾಡು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜರುಗಿತು. ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ. ಸುಜಾತ ಸಮಾರಂಭ ಉದ್ಘಾಟಿಸಿದರು.
ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಸ್ವತಿ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆಯ ಅಧೀಕ್ಷಕ ಡಾ. ಸಂತೋಷ್ ಬಿ. ಮುಖ್ಯ ಭಾಷಣ ಮಾಡಿದರು. ಜಿಲ್ಲಾ ಸಹಾಯಕ ಮಾಸ್ ಮೀಡಿಯಾ ಅಧಿಕಾರಿ ಪಿ.ಪಿ. ಹಸೀಬ್ ಸ್ವಾಗತಿಸಿದರು. ಜಿಲ್ಲಾ ಎಂಸಿಎಚ್ ಅಧಿಕಾರಿ ಪಿ. ಉಷಾ ವಂದಿಸಿದರು.
ಈ ಸಂದರ್ಭ ನಡೆದ ಜಾಗೃತಿ ವಿಚಾರ ಸಂಕಿರಣದಲ್ಲಿ ಕಾಞಂಗಾಡ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಬಿಪಿನ್ ಕೆ. ನಾಯರ್ ಅವರು ಎದೆಹಾಲಿನ ಮಹತ್ವದ ಕುರಿತು ತರಗತಿ ನಡೆಸಿದರು. ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ. ರಾಮದಾಸ್ ಎ.ವಿ. ಮಾತನಾಡಿ, ಎದೆ ಹಾಲು ಮಗು ಸೇವಿಸಬೇಕಾದ ಪೌಷ್ಟಿಕ ಹಾಗೂ ರೋಗನಿರೋಧಕ ಶಕ್ತಿ ಹೊಂದಿರುವ ಸಂಪೂರ್ಣ ಆಹಾರವಾಗಿದೆ. ಇದು 'ಸೂಪರ್ ಫುಡ್' ಆಗಿದ್ದು, ಎದೆಹಾಲುಣಿಸುವಿಕೆಯು ತಾಯಿ ಮತ್ತು ಮಗುವಿನ ನಡುವಿನ ಬಾಂಧವ್ಯವನ್ನು ಬಲಪಡಿಸುವ ವಿಷಯವಾಗಿದೆ. 2030 ರ ವೇಳೆಗೆ, ಕೇರಳದ ಎಲ್ಲಾ ಶಿಶುಗಳಿಗೆ ಜನನದ ಮೊದಲ ಗಂಟೆಯೊಳಗೆ ತಾಯಿಯ ಎದೆ ಹಾಲು ಲಭ್ಯವಾಗಿಸುವುದು ಹಾಗೂ ಮುಂದಿನ 6 ತಿಂಗಳ ವಯಸ್ಸಿನ ವರೆಗೆ ಎದೆ ಹಾಲನ್ನು ಆಹಾರವಾಗಿ ಮಾತ್ರ ನೀಡುವುದನ್ನು ಖಚಿತಪಡಿಸಿಕೊಳ್ಳಲು ಜಾಗೃತಿ ಆಯೋಜಿಸಲಾಗಿದೆ. ಸ್ತನ್ಯಪಾನ ಸಪ್ತಾಹದ ಅಂಗವಾಗಿ, ಆಗಸ್ಟ್ 1 ರಿಂದ ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ವಿವಿಧ ಜಾಗೃತಿ ಅಭಿಯಾನ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ನೇರ ಪ್ರಶ್ನೋತ್ತರ ಸ್ಪರ್ಧೆ ಆಯೋಜಿಸಲಾಗಿದ್ದು, ಜಿಲ್ಲಾ ಎಂಸಿಎಚ್ ಅಧಿಕಾರಿ ಪಿ. ಉಷಾ ಮತ್ತು ಜಿಲ್ಲಾ ಸಾರ್ವಜನಿಕ ಆರೋಗ್ಯ ನರ್ಸ್ ಶಾಂತಾ ನೇತೃತ್ವ ವಹಿಸಿದ್ದರು. ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು, ಗರ್ಭಿಣಿಯರು, ಎದೆಹಾಲುಣಿಸುವ ತಾಯಂದಿರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ಕಾಸರಗೋಡು ಜಿಲ್ಲಾ ವೈದ್ಯಕೀಯ ಕಚೇರಿ (ಆರೋಗ್ಯ), ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ಐಎಪಿ ಕಾಂಞಂಗಾಡ್ ಇವುಗಳ ಜಂಟಿ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.





