ಕಾಸರಗೋಡು: ಐಸಿಎಆರ್-ಸಿಪಿಸಿಆರ್‍ಐ ಕಾಸರಗೋಡು ಮತ್ತು ಕಾಯಂಕುಲಂನಲ್ಲಿರುವ ಕೃಷಿ ವಿಜ್ಞಾನ ಕೇಂದ್ರಗಳ ಜಂಟಿ ಸಹಯೋಗದೊಂದಿಗೆ ಪ್ರಧಾನ ಮಂತ್ರಿ ಕಿಸಾನ್ ಉತ್ಸವ ದಿವಸ್ ಕಾರ್ಯಕ್ರಮ ಕಾಸರಗೋಡು ಸಿಪಿಸಿಆರ್‍ಐ ಸಭಾಂಗಣದಲ್ಲಿ ಜರುಗಿತು.
ಈ ಸಂದರ್ಭ ರಾಷ್ಟ್ರದ ಕೃಷಿಕರನ್ನುದ್ದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಡೆಸಿದ ಭಾಷಣದ ನೇರ ಪ್ರಸಾರ ನಡೆಸಲಾಯಿತು. ಕಿಸಾನ್ ಸಮ್ಮಾನ್ ನಿಧಿಯನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿದೆ. ಇಲ್ಲಿಯವರೆಗೆ, 1.75 ಲಕ್ಷ ಕೋಟಿ ಮೊತ್ತವನ್ನು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಪಾವತಿಸಲಾಗಿದೆ. ಲಾಕ್‍ಪತಿ ದೀದಿ ಕಾರ್ಯಕ್ರಮವು ಗ್ರಾಮೀಣ ಮಹಿಳೆಯರಿಗೂ ಪ್ರಯೋಜನವನ್ನು ನೀಡಿದೆ. ಬೆಲೆಗಳ ಮೇಲಿನ ವ್ಯಾಪಾರ ಸಂಬಂಧಿತ ಜಾಗತಿಕ ಪ್ರಭಾವಗಳನ್ನು ನಿವಾರಿಸಲು 'ವೋಕಲ್ ಫಾರ್ ಲೋಕಲ್' ಉತ್ಪಾದನೆಯನ್ನು ಬಲಪಡಿಸಲು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.
ಕಾಸರಗೋಡಿನ ಸಿಪಿಸಿಆರ್‍ಐನಲ್ಲಿ ನಡೆದ ಸಂವಾದ ಕಾರ್ಯಕ್ರಮವನ್ನು ಶಾಸಕ ಎನ್.ಎ ನೆಲ್ಲಿಕುನ್ನು ಉದ್ಘಾಟಿಸಿ ಮಾತನಾಡಿ, ಹವಾಮಾನ ಬದಲಾವಣೆಯಿಂದ ಉಂಟಾಗುವ ಸವಾಲುಗಳು, ಆಗಾಗ್ಗೆ ಕೃಷಿ ನಷ್ಟಗಳಿಗೆ ಕಾರಣವಾಗುತ್ತಿರುವ ಕಾಲಘಟ್ಟದಲ್ಲಿ ರೈತರನ್ನು ಬೆಂಬಲಿಸುವ ರೀತಿಯಲ್ಲಿ ಕೃಷಿ ತಂತ್ರಜ್ಞಾನಗಳ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು. ಸಿಪಿಸಿಆರ್‍ಐನ ರೈತ ಸ್ನೇಹಿ ವಿಧಾನಗಳಿಗೆ ಅಭಿನಂದನೆ ಸಲ್ಲಿಸಿದ ಅವರು ಕಿಸಾನ್ ಸಮ್ಮಾನ್ ನಿಧಿಯ ಪ್ರಯೋಜನ ಮತ್ತಷ್ಟು ಕೃಷಿಕರಿಗೆ ಲಭಿಸುವಂತಾಗಲಿ ಎಂದು ತಿಳಿಸಿದರು.
ಸಿಪಿಸಿಆರ್‍ಐ ನಿರ್ದೇಶಕ ಡಾ. ಕೆ.ಬಿ. ಹೆಬ್ಬಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಿಳಿ ನೊಣಗಳ ಬಾಧೆ ತಡೆಗಟ್ಟುವಲ್ಲಿ ನೈಸರ್ಗಿಕ ಕೃಷಿ ಸಹಾಯಕವಾಗಿದೆ. ಹವಾಮಾನ-ನಿರೋಧಕ ಕೃಷಿ ಪದ್ಧತಿಗಳ ಪ್ರಾಮುಖ್ಯತೆ ಮತ್ತು ತಂತ್ರಜ್ಞಾನ-ಚಾಲಿತ ಪರಿಹಾರ ಇಂದಿನ ಅಗತ್ಯಗಳಲ್ಲಿ ಒಂದಾಗಿದ್ದು, ಇವುಗಳಲ್ಲಿ ಹಲವು ತಂತ್ರಜ್ಞಾನಗಳನ್ನು ಐಸಿಎಆರ್-ಸಿಪಿಸಿಆರ್‍ಐ ಅಭಿವೃದ್ಧಿಪಡಿಸಿ ಉತ್ತೇಜಿಸುತ್ತಿರುವುದಾಗಿ ತಿಳಿಸಿದರು.
'ಆತ್ಮಾ' ಉಪನಿರ್ದೇಶಕಿ ಸುಮಾ, ಕೆವಿಕೆಯ ಎಸ್‍ಎಂಎಸ್‍ನ ಡಾ. ಬೆಂಜಮಿನ್ ಮ್ಯಾಥ್ಯೂ ಅವರು ರೈತರು ಮತ್ತು ವಿದ್ಯಾರ್ಥಿಗಳೊಂದಿಗೆ 'ಕಾಸರಗೋಡು ಜಿಲ್ಲೆಯಲ್ಲಿ ನೈಸರ್ಗಿಕ ಕೃಷಿಯ ವ್ಯಾಪ್ತಿ' ಕುರಿತು ಸಂವಾದ ನಡೆಸಿದರು. ಈ ಸಂದರ್ಭ ಜೀವಾಮೃತ, ನೀಮಾಸ್ತ್ರ ಮತ್ತು ಬ್ರಹ್ಮಾಸ್ತ್ರದಂತಹ ಜಮೀನಿನಲ್ಲಿ ನೈಸರ್ಗಿಕ ಕೃಷಿ ಉತ್ಪನ್ನಗಳ ತಯಾರಿಕೆಯ ಪ್ರಾತ್ಯಕ್ಷಿಕೆಯನ್ನು ರೈತರಿಗಾಗಿ ಮಾಡಲಾಯಿತು. ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಕೆ. ಪೆÇನ್ನುಸ್ವಾಮಿ ಸ್ವಾಗತಿಸಿದರು. ಕೆವಿಕೆ ಕಾಸರಗೋಡಿನ ಮುಖ್ಯಸ್ಥ ಡಾ. ಟಿ.ಎಸ್. ಮನೋಜ್‍ಕುಮಾರ್ ವಂದಿಸಿದರು.




