ಕಾಸರಗೋಡು: ಕೇಂದ್ರ ಸರ್ಕಾರದ ಸವಲತ್ತುಗಳು ಮತ್ತು ಸಬ್ಸಿಡಿ ವಿತರಣೆಯನ್ನು ಪಾರದರ್ಶಕವಾಗಿಸಲು ಮತ್ತು ಅವುಗಳು ನೈಜ ಫಲಾನುಭವಿಗಳನ್ನು ತಲುಪುವಂತೆ ಮಾಡುವ ಮೂಲಕ ಭಾರತದ ಕೋಟ್ಯಂತರ ಸಾಮಾನ್ಯ ಜನರು ನರೇಂದ್ರ ಮೋದಿ ಸರ್ಕಾರಕ್ಕೆ ಋಣಿಯಾಗಿದ್ದಾರೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ.
ಅವರು ಬಿಜೆಪಿ ಕುತ್ತಿಕೋಲ್ ಪಂಚಾಯಿತಿ 5ನೇವಾರ್ಡ್ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದರು.
ಪಿಣರಾಯಿ ವಿಜಯನ್ ಅವರ 10 ವರ್ಷಗಳ ಆಳ್ವಿಕೆಯಲ್ಲಿ ಕೇರಳದ ಆರ್ಥಿಕತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರ ಸಂಪೂರ್ಣ ನೆಲಕಚ್ಚಿದೆ. ರಾಜ್ಯದಲ್ಲಿ ಉತ್ತಮ ಶಿಕ್ಷಣ ಮತ್ತು ಉದ್ಯೋಗಕ್ಕೂ ಇಲ್ಲಿ ಅವಕಾಶವಿಲ್ಲದಾಗಿದೆ ಎಂದು ತಿಳಿಸಿದರು.
ಬೂತ್ ಸಮಿತಿ ಅಧ್ಯಕ್ಷ ಸಂಜೀವ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮುಳಿಯಾರ್ ಮಂಡಲ ಅಧ್ಯಕ್ಷ ದಿಲೀಪ್ ಪಲ್ಲಂಜಿ, ಪ್ರಧಾನ ಕಾರ್ಯದರ್ಶಿಜಯಕುಮಾರ್ ಮಾನಡ್ಕ, ಕುತ್ತಿಕೋಲ್ ಪಂಚಾಯತ್ ಸಮಿತಿ ಅಧ್ಯಕ್ಷ ವಿವೇಕಾನಂದ ಪಾಲಾರ್, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಜನಾರ್ದನನ್ ಪಳ್ಳತ್ತಿಕ್ಕಲ್, ಯುವ ಮೋರ್ಚಾ ಮುಳಿಯಾರ್ ಮಂಡಲದ ಅಧ್ಯಕ್ಷ ಅಶ್ವಿನ್ ಕೊಲ್ಲಾಲಯಿಲ್, ಬಿನು ಪಡ್ಪು ಉಪಸ್ಥಿತರಿದ್ದರು. ಸಮ್ಮೇಳನದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪ್ಲಸ್ ಟು ಪರೀಕ್ಷೆಗಳಲ್ಲಿ ಹೆಚ್ಚಿನ ಫಲಿತಾಂಶ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.





