ಕಾಸರಗೋಡು: ಜಿಲ್ಲೆಯ ಜನತೆ ಪ್ಯಾಸೆಂಜರ್ ರೈಲುಗಳ ಕೊರತೆಯಿಂದ ಎದುರಿಸುತ್ತಿರುವ ಸಂಚಾರ ಸಮಸ್ಯೆ ಪರಿಹರಿಸಲು ಮೆಮು ರೈಲು ಸೇವೆಯನ್ನು ಮಂಗಳೂರು ವರೆಗೆ ವಿಸ್ತರಿಸಬೇಕೆಂದು ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ಒತ್ತಾಯಿಸಿತು. ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ವಹಿಸಿದ್ದರು. ಪ್ರಸಕ್ತ ಕಣ್ಣೂರು ಮತ್ತು ಮಂಗಳೂರು ನಡುವೆ ಒಂದೇ ಒಂದು ಪ್ರಯಾಣಿಕ ರೈಲು ಸಂಚಾರ ನಡೆಸುತ್ತಿದೆ. ಇದು ಪ್ರತಿದಿನ ಪ್ರಯಾಣಿಕರ ದಟ್ಟಣೆಯಿಂದ ಸಂಚರಿಸುತ್ತಿದ್ದು, ನೂರಾರು ಮಂದಿ ಕಾರ್ಮಿಕರು, ಕಚೇರಿ ಕೆಲಸಗಾರರು, ವಿದ್ಯಾರ್ಥಿಗಳು ಮತ್ತು ರೋಗಿಗಳು ಇದೇ ರೈಲನ್ನು ಅವಲಂಬಿಸಿರುತ್ತಾರೆ. ಶೋರ್‍ನೂರಿನಿಂದ ಕಣ್ಣೂರು ಆಗಮಿಸುವ ರೈಲು ಒಂಬತ್ತು ತಾಸುಗಳ ಕಾಲ ಕಣ್ಣೂರು ನಿಲ್ದಾಣದಲ್ಲೇ ತಂಗುತ್ತಿದ್ದು, ಈ ರೈಲನ್ನು ಮಂಗಳೂರಿಗೆ ವಿಸ್ತರಿಸಿದಲ್ಲಿ ಹೆಚ್ಚಿನ ಪ್ರಯೋಜನವಾಗಲಿರುವುದಾಗಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಯಿತು,
ಕಾಸರಗೋಡು ಜಿಲ್ಲೆಯಲ್ಲಿ ಸಮುದ್ರ ಕೊರೆತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ಆಗ್ರಹಿಸಿದೆ. ಬ್ಯಾರಿ ಭಾಷೆ ಮಾತಾಡುವವರಿಗೆ 'ಕನ್ನಡ ಮಾತೃಭಾಷಾ ಪ್ರಮಾಣಪತ್ರ' ನೀಡಲು ಪ್ರಸಕ್ತ ಸರ್ಕಾರದ ಆದೇಶದಂತೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ. ಈ ಹಿಂದೆ ಬ್ಯಾರಿ ಭಾಷೆ ಭಾಷಿಕರಿಗೆ ಉನ್ನತ ಶಿಕ್ಷಣಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿರಲಿಲ್ಲ. ಅರ್ಜಿ ಸಲ್ಲಿಸುವಾಗ ಎದುರಾಗುವ ತಾಂತ್ರಿಕ ಅಡೆತಡೆಗಳನ್ನು ಶಾಸಕ ಎಕೆಎಂ ಅಶ್ರಫ್ ಪ್ರಸ್ತಾಪಿಸಿದ ನಂತರ ಈ ಸಲಹೆ ಬಂದಿತು.
ಶಾಸಕ ಎಂ. ರಾಜಗೋಪಾಲನ್‍ಶಾಸಕರು ನಿರ್ಣಯ ಮಂಡಿಸಿದರು. ಸಭೆಯಲ್ಲಿ ಶಾಸಕ ಸಿ.ಎಚ್. ಕುಂಞಂಬು ಶಾಸಕರು, ಎನ್.ಎ. ನೆಲ್ಲಿಕುನ್ನು, ಎ.ಕೆ.ಎಂ. ಅಶ್ರಫ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉಪಸ್ಥಿತರಿದ್ದರು. ಜಿಲ್ಲಾ ಯೋಜನಾ ಅಧಿಕಾರಿ ಟಿ. ರಾಜೇಶ್ ವರದಿ ಮಂಡಿಸಿದರು.





