ಕಾಸರಗೋಡು: ಮಂಗಳೂರಿಂದ ಕಣ್ಣೂರಿಗೆ ಸಂಚರಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ, ಕಾಞಂಗಾಡು ನಿವಾಸಿ ಜೆ. ಸಾಜನ್ ಎಂಬವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ವಿದ್ಯಾರ್ಥಿಗಳನ್ನು ರೈಲ್ವೆ ಠಾಣೆ ಎಸ್.ಐ ಎಂ.ಕೆ ಪ್ರಕಾಶನ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಪಾಲಕ್ಕುನ್ನು ನಿವಾಸಿ ಪಿ.ಎ ಮಹಮ್ಮದ್ ಜಸಿ ಹಾಗೂ ಚೇಟುಕುಂಡು ನಿವಾಸಿ ಮಹಮ್ಮದ್ ರಸೀಂ ಬಂಧಿತರು. ಜುಲೈ 28ರಂದು ಘಟನೆ ನಡೆದಿದ್ದು, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳ ಗುಂಪೊಂದು ಆಟವಾಡುತ್ತಾ ಪ್ರಾಧ್ಯಾಪಕ ಸಾಜನ್ ಅವರ ಹೆಗಲ ಮೇಲೆ ಕೈಹಾಕಿ ಕಿರುಕುಳ ನೀಡಿದ್ದು, ಇದನ್ನು ಪ್ರಶ್ನಿಸಿರುವುದಕ್ಕೆ ರೈಲಿನೊಳಗೆ ಹಾಗೂ ಹೊರಗೆ ನಿಲ್ದಾಣದಲ್ಲೂ ವಿದ್ಯಾರ್ಥಿಗಳು ಹಲ್ಲೆ ನಡೆಸಿರುವುದಾಗಿ ಸಾಜನ್ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದರು. ಬಂಧಿತರ ವಿದ್ಯಾರ್ಥಿಗಳು ಮಂಗಳೂರಿನ ಕಾಲೇಜೊಂದರ ಬಿಸಿಎ ವಿದ್ಯಾರ್ಥಿಗಳಾಗಿದ್ದಾರೆ.




