ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಆ. 3 ರಂದು ಭಾನುವಾರ ವಿಶಿಷ್ಟ ಕರ್ಕಾಟಕ ಮಾಸದ ಔಷಧೀಯ ಗಂಜಿ ಕಾರ್ಯಕ್ರಮ ನಡೆಯಲಿದೆ. ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಮಠದ ಆರೋಗ್ಯ ಯೋಜನೆಯ ನಿತ್ಯಾನಂದ ಆಯುರ್ವೇದಿಕ್ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಕೇರಳದ ಪಾರಂಪರಿಕ ನಾಟಿ ವೈದ್ಯರುಗಳು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಹಸಿರು ಪರಿಸರದ ಪ್ರತಿಯೊಂದು ಗಿಡ ಬಳ್ಳಿ ಎಲೆಗಳು ಹೊಂದಿರುವ ಔಷಧೀಯ ಗುಣಗಳ ಬಗ್ಗೆ ಕರ್ಕಾಟಕ ಮಾಸದಲ್ಲಿ ಬಳಕೆಯ ಮಹತ್ವದ ಬಗ್ಗೆ ಮತ್ತು ಔಷಧೀಯ ಗುಣಗಳ ಬಗ್ಗೆ ನಾಟಿವೈದ್ಯ ಟಿ.ಟಿ.ಅರವಿಂದಾಕ್ಷನ್ ಮತ್ತು ಪೈವಳಿಕೆ ಆರೋಗ್ಯ ಕೇಂದ್ರದ ಡಾ. ಗಣೇಶ್ ಕುಮಾರ್ ಮಾಹಿತಿ ನೀಡಲಿದ್ದಾರೆ.
ಪೂಜ್ಯ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ರಾಧಾಕೃಷ್ಣನ್ ಬಂದ್ಯೋಡು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ರಾಜಮೋಹನ್ ಉಣ್ಣಿತ್ತಾನ್, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಉದ್ಯಮಿ ಜಿತೇಂದ್ರ ಕೊಟ್ಟಾರಿ, ತಲಪಾಡಿ ಶ್ರೀಶಾರದಾ ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ.ಸಂದೀಪ್ ಬೇಕಲ್, ನಿತ್ಯಾನಂದ ಆಯುರ್ವೇದ ಸಂರಕ್ಷಣಾ ಸಮಿತಿ ಕೇರಳದ ಅಧ್ಯಕ್ಷ ಜಯದೇವನ್ ಕಣ್ಣೂರ್ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಡಾ.ಡಿ ರಮಾನಾಥನ್ ಅವರಿಗೆ ಈ ವರ್ಷದ "ಆಯುಶ್ರೀ 2025" ಪ್ರಶಸ್ತಿ ನೀಡಿ ಗೌರವಿಸಲಾಗುವುದು.




