ಕುಂಬಳೆ : ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಪೆರುವಾಡ್ ಎಂಬಲ್ಲಿ ಪತಿ ಮನೆಯಲ್ಲಿ ನಿರಂತರ ಕಿರುಕುಳಕ್ಕೆ ಸಂಬಂಧಿಸಿ ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಮಹಿಳೆಯ ಪತಿ ಪೆರುವಾಡ್ ಕಡಪ್ಪುರ ನಿವಾಸಿ ಫಿರೋಸ್, ಈತನ ಮನೆಯವರಾದ ಅಬ್ದುಲ್ ರಹಮಾನ್, ನಬೀಸಾ ಎಂಬವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕಾರಡ್ಕ ನಿವಾಸಿ ಮಹಮ್ಮದ್ ಅವರ 20ರ ಹರೆಯದ ಪುತ್ರಿಯ ವಿವಾಹ ಫಿರೋಸ್ ಜತೆ 2024 ಏ. 21ರಂದು ನಡೆದಿದ್ದು, ಯುವತಿಗೆ ಆರೋಗ್ಯ ಸಮಸ್ಯೆಯಿದ್ದು, ಬೇರೆ ಮದುವೆ ನಡೆಸುವ ಆಲೋಚನೆಯಿರಿಸಿ 2025ರ ಮಾ. 15ರಿಂದ ಪತಿ ಹಾಗೂ ಪತಿ ಮನೆವರಿಂದ ನಿರಂತರ ಕಿರುಕುಳ ನಡೆದಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ವಿಪರ್ಯಾಸವೆಂದರೆ ಪತಿ ಮನೆಯ ಕಿರುಕುಳ ಸಹಿಸಲಾಗದೆ, ಪುಟ್ಟ ಮಗುವಿನೊಂದಿಗೆ ಯುವತಿ ತವರಿಗೆ ತೆರಳಿದ್ದು, ಈ ಸಂದರ್ಭ ಯುವತಿ ತಂದೆ ಮಹಮ್ಮದ್ ಅಮಾನುಷವಾಗಿ ಹಲ್ಲೆ ನಡೆಸಿ ಮತ್ತೆ ಪತಿ ಮನೆಗೇ ತೆರಳುವಂತೆ ತಾಕೀತು ನೀಡಿರುವ ಬಗ್ಗೆ ಪೊಲೀಸರು ಯುವತಿ ತಂದೆ ಮಹಮ್ಮದ್ ವಿರುದ್ಧವೂ ಕೇಸು ದಾಖಲಿಸಿಕೊಂಡಿದ್ದಾರೆ. ತವರಿಂದ ಕುಂಬಳೆಗೆ ತೆರಳಿ ಮಗುವಿನೊಂದಿಗೆ ಆತ್ಮಹತ್ಯೆಗೂ ಯುವತಿ ಯತ್ನ ನಡೆಸಿದ್ದು, ಈ ಮಧ್ಯೆ ಸ್ಥಳೀಯ ನಾಗರಿಕರು ಈಕೆಯನ್ನು ರಕ್ಷಿಸಿ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿಯಿಂದ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು ನಂತರ ಯುವತಿ ಮತ್ತು ಮಗುವನ್ನು ವಿದ್ಯಾನಗರದಲ್ಲಿರುವ 'ಸಖಿ'ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದಾರೆ.

