ಕಾಸರಗೋಡು: ಶಿಥಿಲಾವಸ್ಥೆಯಲ್ಲಿರುವ ನಗರದ ಕರಂದಕ್ಕಾಡಿನಿಂದ ರೈಲ್ವೆ ನಿಲ್ದಾಣ ವರೆಗಿನ ರಸ್ತೆ ದುರಸ್ತಿ ನಡೆಸುವಲ್ಲಿ ಅಧಿಕಾರಿಗಳು ತೋರುವ ನಿರ್ಲಕ್ಷ್ಯ ಧೋರಣೆ ಖಂಡಿಸಿ ಬಿಎಂಎಸ್ ಕಾಸರಗೋಡು ಪ್ರಾದೇಶಿಕ ಸಮಿತಿ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಬಿಎಂಎಸ್ ಕಾಸರಗೋಡು ಜಿಲ್ಲಾ ಸಮಿತಿ ಕಚೇರಿ ವಠಾರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಬ್ಯಾಂಕ್ ರಸ್ತೆ ಮೂಲಕ ಹಾದು, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ವಠಾರದ ವರೆಗೆ ಸಾಗಿ ಬಂದಿತ್ತು. ಬಿಎಂಎಸ್ ಜಿಲ್ಲಾಧ್ಯಕ್ಷ ಉಪೇಂದ್ರ ಕೊಟಕಣಿ ಧರಣಿ ಉದ್ಘಾಟಿಸಿ ಮಾತನಾಡಿ, ಕರಂದಕ್ಕಾಡಿನಿಂದ ರೈಲ್ವೆ ನಿಲ್ದಾಣ ವರೆಗಿನ ರಸ್ತೆ ಕಳೆದ ಕೆಲವು ತಿಂಗಳಿಂದ ಶಿಥಿಲಾವಸ್ಥೆಯಲ್ಲಿದ್ದರೂ, ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯ ಧೋರಣೆಯಿಂದ ರಸ್ತೆ ಮತ್ತಷ್ಟು ಹಾಳಾಗಲು ಕಾರಣವಾಗಿದೆ. ಅಧಿಕಾರಿಗಳು ತಮ್ಮ ಧೋರಣೆ ಬದಲಾಯಿಸದಿದ್ದಲ್ಲಿ, ಬಿಎಂಎಸ್ ಪ್ರಬಲ ಹೋರಾಟಕ್ಕೆ ಮುಂದಾಗಲಿರುವುದಾಗಿ ತಿಳಿಸಿದರು.
ಬಿಎಂಎಸ್ ಕಾಸರಗೋಡು ಪ್ರದೇಶ ಅಧ್ಯಕ್ಷ ಬಾಲಕೃಷ್ಣ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು, ಜಿಲ್ಲಾ ಜಂಟಿ ಕಾರ್ಯದರ್ಶಿಗಳಾದ ದಿನೇಶ್ ಬಂಬ್ರಾಣ, ಹರೀಶ್ ಕುದುರೆಪಾಡಿ, ಗುರುದಾಸ್ ಚೇನಕೋಡ್, ಮುಖಂಡರಾದ ಕುಞÂಕಣ್ಣನ್ ಪರವನಡ್ಕ, ಶ್ರೀಧರನ್ ಚೇನಕೋಡ್, ಎ.ಕೇಶವ, ಎಸ್.ಕೆ. ಉಮೇಶ, ಭಾಸ್ಕರನ್ ಪೆÇಯಿನಾಚಿ, ಮನೋಜ್ ಕುಮಾರ್ ಧರಣಿ ನೇತೃತ್ವ ವಹಿಸಿದ್ದರು. ಪ್ರಾದೇಶಿಕ ಕಾರ್ಯದರ್ಶಿ ಬಾಬು ಮೋನ್ ಸ್ವಾಗತಿಸಿದರು. ವಿಶ್ವನಾಥ ಶೆಟ್ಟಿ ವಂದಿಸಿದರು.
ಪ್ರತಿಭಟನಾಕಾರರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಈ ಸಂದರ್ಭ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪ್ರತಿಭಟನಾಕಾರರನ್ನು ಪೊಲೀಸರು ಬಲಪ್ರಯೋಗಿಸಿ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.



