ಕಾಸರಗೋಡು: ಹದಿಮೂರರ ಹರೆಯದ ಬಾಲಕ ಚಲಾಯಿಸಿದ ಸ್ಕೂಟರ್ ಅಪಘಾತಕ್ಕೀಡಾದ ಘಟನೆಯಲ್ಲಿ, ವ್ಯಕ್ತಿಪಲ್ಲಟಗೊಳಿಸಿ ಆರೋಪಿಯನ್ನು ಠಾಣೆಗೆ ಹಾಜರುಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಞಂಗಾಡು ವಡಗರಮುಕ್ ನಿವಾಸಿ ಹಂಸಾ ಎಂಬವರ ಪತ್ನಿ ಪಿ. ಅನೀಸಾ ಎಂಬವರ ವಿರುದ್ಧ ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಮಹಿಳೆ ನ್ಯಾಯಾಲಯದಲ್ಲಿ ತಪ್ಪು ಹೇಳಿಕೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ ಹೊಸದುರ್ಗ ಠಾಣೆ ಇನ್ಸ್‍ಪೆಕ್ಟರ್ ಪಿ. ಅಜಿತ್‍ಕುಮಾರ್ ದೂರಿನನ್ವಯ ಈ ಕೇಸು ದಾಖಲಾಗಿದೆ.
2024ರ ನವೆಂಬರ್‍ನಲ್ಲಿ ಶಂಸೀರ್ ಎಂಬವರು 13ರ ಹರೆಯದ ಪುತ್ರನನ್ನು ಸ್ಕೂಟರ್ ಹಿಂಭಾಗ ಕುಳ್ಳಿರಿಸಿ ಕರೆದೊಯ್ಯುವ ಮಧ್ಯೆ ಏಕಾಏಕಿ ಸ್ಕೂಟರ್ ನಿಲುಗಡೆಗೊಳಿಸಿದಾಗ ಮಗು ರಸ್ತೆಗೆ ಬಿದ್ದ ಪರಿಣಾಂ ಗಂಭೀರ ಗಾಯಗಳುಂಟಾಗಿರುವ ಬಗ್ಗೆ ಕೇಸು ದಾಖಲಿಸಲಾಗಿತ್ತು. ನ್ಯಾಯಾಲಯ ನಿರ್ದೇಶ ಮೇರೆಗೆ ಪ್ರಕರಣದ ಸಮಗ್ರ ತನಿಖೆ ನಡೆಸಿದಾಗ ಸ್ಕೂಟರನ್ನು 13ರ ಹರೆಯದ ಬಾಲಕನೇ ಚಲಾಯಿಸುತ್ತಿರುವುದು ಖಚಿತಗೊಂಡಿತ್ತು. ಅಪಘಾತ ವಿಮೆಯ ಮೊತ್ತ ಪಡೆಯಲು ವ್ಯಕ್ತಿಪಲ್ಲಟಗೊಳಿಸಿರುವುದು ಬೆಳಕಿಗೆ ಬಂದಿತ್ತು.

