ಕುಂಬಳೆ: ಕೀರ್ತನಕುಟೀರ ಕುಂಬಳೆ ಇದರ ಆಶ್ರಯದಲ್ಲಿ, ಕಲಾರತ್ನ ಶಂನಾಡಿಗ ಕುಂಬ್ಳೆ ಇವರ ಹರಿದಾಸ ಶಿಷ್ಯವೃಂದ ನಡೆಸಿಕೊಡುವ ಎಳೆಯರ ಹರಿಕಥಾ ಸಪ್ತಾಹವು ಸೋಮವಾರ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆರಂಭಗೊಂಡಿತು.
ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರಧಾನ ಅರ್ಚಕ ಕೆ. ಕೇಶವ ಅಡಿಗರು ದೀಪಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಾಶೀರ್ವಾದಗೈದರು. ಧಾರ್ಮಿಕ ಮುಂದಾಳು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಂಚಾಲಕ ದಯಾನಂದ ರಾವ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ವಕೀಲ ಸತ್ಯನಾರಾಯಣ ತಂತ್ರಿ ಮಾತನಾಡಿ, ಹಿಂದೂ ಸಮಾಜದ ಋಣಾತ್ಮಕ ಅಂಶವನ್ನು ಹೋಗಲಾಡಿಸಿ ಧನಾತ್ಮಕತೆಯನ್ನು ಮೈಗೂಡಿಸಬಲ್ಲ ಏಕೈಕ ಸಾಧನವೇ ಹರಿಕಥೆ. ಅಂದು ಹಿರಿಯ ಹರಿದಾಸರಿಂದ ಮುನ್ನಡೆಸಲ್ಪಡುತ್ತಿದ್ದ ಈ ಕಲೆ, ಇಂದು ಮಕ್ಕಳ ಮೂಲಕ ನಡೆಯುತ್ತಿದ್ದರೆ ಅದಕ್ಕೆ ಮೂಲ ಕಾರಣ ಹರಿದಾಸರೂ ನಾಟಕ ಕಲಾವಿದರೂ ವಾಗ್ಮಿಯೂ ಆದ ಕಲಾರತ್ನ ಶಂನಾಡಿಗರು. ಅವರು ತಾವು ಹರಿದಾಸರಾಗಿ ಬೆಳೆದದ್ದಲ್ಲದೇ ಈ ಪ್ರಾಚೀನ ಪರಂಪರೆಯ ಕೊಂಡಿಯನ್ನು ಮುಂದಿನ ಪೀಳಿಗೆಗೆ ದಾಟಿಸಲು ಈ ಸಾಹಸಗೈಯುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇಂದು ಅಧ್ಯಾತ್ಮ ಶಕ್ತಿಯನ್ನು ಪಸರಿಸುವುದು ಮಾತ್ರವಲ್ಲ ಸನಾತನತೆಯನ್ನು ಉಳಿಸುವ ನಿಟ್ಟಿನಲ್ಲಿ ಹರಿಕಥಾ ಸತ್ಸಂಗಗಳ ಪಾತ್ರ ಅತೀ ಅಮೂಲ್ಯ. ಅದನ್ನು ಮಕ್ಕಳು ಕಲಿಯುತ್ತಿರುವುದು ನಿಜಕ್ಕೂ ಒಂದು ಅದ್ಭುತವೇ ಸರಿ ಎಂದು ನುಡಿದು, ಕೀರ್ತನಕುಟೀರದ ಸಾಧನೆಯನ್ನು ಶ್ಲಾಘಿಸಿದರು. ಇನ್ನೊಬ್ಬ ಅತಿಥಿ ಧಾರ್ಮಿಕ ಮುಂದಾಳು ಕೆ.ಸಿ. ಮೋಹನ್ ಮಾತನಾಡಿ, ಈ ನೆಲದಲ್ಲಿ ಹರಿಕಥೆ, ಯಕ್ಷಗಾನ, ಭಜನೆ ಇಂತಹ ಕಲೆಗಳು ಬೆಳೆಯುತ್ತಿರುವುದು ಬಹಳ ಸಂತಸದ ವಿಚಾರ. ಹರಿಕಥೆಯಂತಹ ಪ್ರಾಚೀನ ಕಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕೀರ್ತನಕುಟೀರವು ಎಂದೂ ತನ್ನ ಕಾರ್ಯವನ್ನು ನಿಲ್ಲಿಸಕೂಡದು ಎಂಬ ಆಶಯ ವ್ಯಕ್ತಪಡಿಸಿದರು.
ಪ್ರಾರಂಭದಲ್ಲಿ ಕೀರ್ತನಕುಟೀರದ ವಿದ್ಯಾರ್ಥಿಸಿಯರು ಪ್ರಾರ್ಥನೆ ಹಾಡಿದರು. ಸಪ್ತಾಹ ಸಮಿತಿಯ ಸದಸ್ಯ ಶಿವರಾಮ ಯನ್. ಸ್ವಾಗತಿಸಿ, ಕಾರ್ಯದರ್ಶಿ ಪುರುಷೋತ್ತಮ ಆಚಾರ್ಯ ವಂದಿಸಿದರು. ಕೀರ್ತನಕುಟೀರದ ಸಂಚಾಲಕ ಕಲಾರತ್ನ ಶಂನಾಡಿ ಪ್ರಾಸ್ತಾವಿಕ ಮಾತನಾಡಿದರು. ವಿಜಯಲಕ್ಷ್ಮಿ ಶಂನಾಡಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಕುಮಾರಿಯರಾದ ಪ್ರಣಮ್ಯ, ಸುಶ್ಮಿತ ಆಚಾರ್ಯ, ಮೃದುಲ ಹಾಗೂ ಪೂಜಾ ವಾಸುದೇವನ್ ಇವರಿಂದ ಹರಿಕಥೆ ನಡೆಯಿತು. ಹರಿಕಥಾ ಸಪ್ತಾಹ ಆ.24 ತನಕ ಪ್ರತೀ ದಿನ ಸಂಜೆ 5ರಿಂದ 7-30ರ ತನಕ ನಡೆಯಲಿದೆ.




.jpg)
.jpg)
.jpg)
.jpg)
