HEALTH TIPS

ಭಾರತದ ಮೇಲೆ ಸುಂಕ ಹೆಚ್ಚಿಸಿದ್ದೇ ರಷ್ಯಾ ಮಾತುಕತೆಗೆ ಮುಂದಾಯಿತು: ಟ್ರಂಪ್‌

ನ್ಯೂಯಾರ್ಕ್‌/ವಾಷಿಂಗ್ಟನ್‌: 'ರಷ್ಯಾದಿಂದ ಎರಡನೇ ಅತಿ ಹೆಚ್ಚು ಕಚ್ಚಾತೈಲ ಖರೀದಿಸುತ್ತಿದ್ದ ಭಾರತದ ಮೇಲೆ ಹೆಚ್ಚುವರಿ ಸುಂಕ ವಿಧಿಸಿದ್ದರಿಂದಲೇ, ರಷ್ಯಾವು-ಅಮೆರಿಕದ ಜೊತೆಗೆ ಮಾತುಕತೆಗೆ ಮುಂದಾಯಿತು' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

ರಷ್ಯಾ-ಉಕ್ರೇನ್‌ ನಡುವಿನ ಯುದ್ಧ ಕೊನೆಗಾಣಿಸಿ, ಕದನ ವಿರಾಮ ಘೋಷಿಸಲು ಅಂತಿಮ ಒಪ್ಪಂದಕ್ಕೆ ಬರುವ ನಿಟ್ಟಿನಲ್ಲಿ ಅಲಾಸ್ಕದಲ್ಲಿ ಶುಕ್ರವಾರ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಡುವಿನ ಉನ್ನತ ಮಟ್ಟದ ಸಭೆಗೂ ಮುನ್ನವೇ ಈ ಹೇಳಿಕೆ ನೀಡಿದ್ದಾರೆ.

'ನೀವು ರಷ್ಯಾದಿಂದ ಕಚ್ಚಾತೈಲ ಖರೀದಿಸುತ್ತಿದ್ದು, ನಿಮಗೆ ಹೆಚ್ಚುವರಿ ತೆರಿಗೆ ವಿಧಿಸಲಾಗುವುದು ಎಂದು ಭಾರತಕ್ಕೆ ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಅದೇ ರಷ್ಯಾ ಮಾತುಕತೆ ನಡೆಸಲು ಕಾರಣವಾಗಿದೆ' ಎಂದು 'ಫಾಕ್ಸ್‌' ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ತಿಳಿಸಿದ್ದಾರೆ.

ಈ ಬೆಳವಣಿಗೆ ಬೆನ್ನಲ್ಲೇ, 'ರಷ್ಯಾ ಜೊತೆಗಿನ ಮಾತುಕತೆಯ ಬಗ್ಗೆ ಕಾತರನಾಗಿದ್ದೇನೆ. ಎರಡನೇ ಅತಿ ದೊಡ್ಡ ಗ್ರಾಹಕರನ್ನು ಕಳೆದುಕೊಂಡ ನಂತರ ಬಹುಶಃ ಮೊದಲ ಅತಿ ದೊಡ್ಡ ಗ್ರಾಹಕರನ್ನೂ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿಯೇ ರಷ್ಯಾ ಭೇಟಿಗೆ ಮುಂದಾಗಿದೆ' ಎಂದು ಟ್ರಂಪ್ ಹೇಳಿದ್ದಾರೆ.

'ಕಚ್ಚಾತೈಲ ಖರೀದಿಯಲ್ಲಿ ಭಾರತವು ಎರಡನೇ ಅತಿ ದೊಡ್ಡ ರಾಷ್ಟ್ರವಾಗಿದ್ದು, ಚೀನಾವು ಮೊದಲ ಸ್ಥಾನದಲ್ಲಿದೆ' ಎಂದು ಟ್ರಂಪ್‌

'ಟ್ರಂಪ್‌ ಸುಂಕ ಬೆದರಿಕೆ ಹೊರತಾಗಿಯೂ ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿಲ್ಲ ಎಂದು ಭಾರತವು ಗುರುವಾರ ಪುನರುಚ್ಚರಿಸಿದೆ. ಕೇವಲ ಆರ್ಥಿಕ ಪರಿಗಣನೆಯ ಮೇಲೆ ಖರೀದಿ ಪ್ರಕ್ರಿಯೆ ಮುಂದುವರಿಯಲಿದೆ' ಎಂದು ಸ್ಪಷ್ಟಪಡಿಸಿದೆ.

ಬದಲಾವಣೆ ಇಲ್ಲ:

'ರಷ್ಯಾದಿಂದ ತೈಲ ಆಮದು ನಿಲ್ಲಿಸಿಲ್ಲ. ಭಾರತವೂ ಮುಂದೆಯೂ ಖರೀದಿಸಲಿದ್ದು, ಈ ನಿರ್ಧಾರದಲ್ಲಿ ಬದಲಾವಣೆಯಿಲ್ಲ' ಎಂದು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ನ ಮುಖ್ಯಸ್ಥ ಎ.ಎಸ್‌. ಸಾಹ್ನಿ ತಿಳಿಸಿದ್ದಾರೆ.

ಯುದ್ಧ ತಪ್ಪಿಸಿದ್ದು ನಾನೇ;ಟ್ರಂಪ್‌ ಪುನರುಚ್ಚಾರ

'ಭಾರತ-ಪಾಕ್‌ ನಡುವೆ ಅಣ್ವಸ್ತ್ರ ಯುದ್ಧ ನಡೆಯುವ ಸಾಧ್ಯತೆ ಇದ್ದು ಅದನ್ನು ನಾನೇ ತಪ್ಪಿಸಿದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಒವಲ್‌ ಕಚೇರಿಯಲ್ಲಿ ಮಾತನಾಡಿದ ಅವರು 'ನೀವು ಭಾರತ ಹಾಗೂ ಪಾಕಿಸ್ತಾನವನ್ನು ಒಮ್ಮೆ ಗಮನಿಸಿ. ವಿಮಾನಗಳನ್ನು ಗಾಳಿಯಲ್ಲಿ ಹೊಡೆದುರುಳಿಸಲಾಯಿತು. ಆರರಿಂದ ಏಳು ವಿಮಾನಗಳು ಕೆಳಕ್ಕುರುಳಿದವು. ಅವರು ಅಣ್ವಸ್ತ್ರ ಯುದ್ಧಕ್ಕೂ ಮುಂದಾಗಿದ್ದರು ನಾವು ಸಮಸ್ಯೆಯನ್ನು ಬಗೆಹರಿಸಿದೆವು' ಎಂದು ಹೇಳಿದ್ದಾರೆ.

ಜಾಗತಿಕ ವ್ಯವಹಾರದಲ್ಲಿ ಭಾರತದ ಪ್ರಾಬಲ್ಯ: ಪುಟಿನ್ ಶ್ಲಾಘನೆ

'ಜಾಗತಿಕ ವ್ಯವಹಾರಗಳಲ್ಲಿ ಭಾರತವು ಸ್ಪಷ್ಟವಾದ ಪ್ರಾಬಲ್ಯ ಹೊಂದಿದೆ' ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ತಿಳಿಸಿದ್ದಾರೆ. ಅಂತರರಾಷ್ಟ್ರೀಯ ಪ್ರಮುಖ ವಿಚಾರಗಳಲ್ಲಿ ಭಾರತವು ಸಕ್ರಿಯ ಪಾತ್ರವನ್ನು ಉಲ್ಲೇಖಿಸಿ ಈ ಅಭಿಪ್ರಾಯಪಟ್ಟಿದ್ದಾರೆ. ಸ್ವಾತಂತ್ರ್ಯ ದಿನದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂದೇಶ ಕಳುಹಿಸಿರುವ ಅವರು 'ಎರಡು ರಾಷ್ಟ್ರಗಳ ನಡುವೆ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ರಷ್ಯಾ ಬದ್ಧವಾಗಿದೆ' ಎಂದು ಪುಟಿನ್‌ ಒತ್ತಿ ಹೇಳಿದ್ದಾರೆ. 'ಜಾಗತಿಕ ವ್ಯವಹಾರಗಳಲ್ಲಿ ಭಾರತವು ಸ್ಪಷ್ಟವಾದ ಪ್ರಾಬಲ್ಯ ಹೊಂದಿದೆ. ಹಲವು ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ಸಕ್ರಿಯವಾಗಿ ಭಾಗವಹಿಸಿದೆ' ಎಂದು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries