ಕಾಸರಗೋಡು: ಮಲಬಾರ್ ಪ್ರದೇಶದಲ್ಲಿ ಎಸ್‍ಡನ್‍ಡಿಪಿ ಯೂನಿಯನ್ ನೇತೃತ್ವದಲ್ಲಿರುವ ದೇವಾಲಯಗಳಲ್ಲಿ ವಿಧ್ಯುಕ್ತ ಹುದ್ದೆಗಳನ್ನು ಹೊಂದಿರುವ ದೇವಾಲಯ ಸ್ಥಾನಿಕರಿಗೆ ವೇತನ ಮಂಜೂರುಮಾಡಲು ಬಜೆಟ್‍ನಲ್ಲಿ ಹಣ ಮೀಸಲಿರುಸುವಂತೆ ಕಾಸರಗೋಡು ಜಿಲ್ಲೆಯ ಎಸ್.ಎನ್.ಡಿ.ಪಿ. ಒಕ್ಕೂಟ ವತಿಯಿಂದ ರಾಜ್ಯ ಸಹಕಾರ ಮತ್ತು ಮುಜರಾಯಿ ಖಾತೆ ಸಚಿವ ವಿ.ಎನ್ ವಾಸವನ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದೆ.
ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕಾಸರಗೋಡಿಗೆ ಆಗಮಿಸಿದ್ದ ಸಚಿವರನ್ನು ಯೂನಿಯನ್ ಪದಾಧಿಕಾರಿಗಳು ಭೇಟಿ ಮಾಡಿ ಈ ಮನವಿ ಸಲ್ಲಿಸಿದ್ದಾರೆ. ಎಸ್.ಎನ್.ಡಿ.ಪಿ. ಪ್ರಧಾನ ಕಾರ್ಯದರ್ಶಿ ವೆಳ್ಳಾಪಳ್ಳಿ ನಟೇಶನ್ ಅವರ ನಿರ್ದೇಶನದ ಮೇರೆಗೆ ಮನವಿ ಸಲ್ಲಿಸಲಾಗಿದೆ.
ಮಲಬಾರ್‍ನಲ್ಲಿ ದೇವಾಲಯಗಳಲ್ಲಿ ವಿಧ್ಯುಕ್ತ ಹುದ್ದೆಗಳನ್ನು ಹೊಂದಿರುವ ದೇವಾಲಯ ಆಚಾರ ಸ್ಥಾನಿಕರಿಗೆ ಮಾಸಿಕವಾಗಿ ನೀಡುತ್ತಿರುವ 1600 ರೂ. ವೇತನದಲ್ಲಿ ಕಳೆದ ಮೂರು ತಿಂಗಳಿಂದ ಲಭಿಸಲು ಬಾಕಿಯಿದ್ದು, ಈ ಮೊತ್ತವನ್ನೂ ತಕ್ಷಣ ಬಿಡಗಡೆಮಾಡುವಂತೆ ಮನವಿಯಲ್ಲಿ ಆಗ್ರಹಿಸಲಾಯಿತು.
ಎಸ್‍ಎನ್‍ಡಿಪಿ ಕಾಸರಗೋಡು ಒಕ್ಕೂಟದ ಕಾರ್ಯದರ್ಶಿ ಗಣೇಶ ಪಾರೆಕಟ್ಟ, ಉದುಮ ಒಕ್ಕೂಟದ ಕಾರ್ಯದರ್ಶಿ ಜಯಾನಂದನ್ ಪಾಲಕ್ಕುನ್ನು, ಹೊಸದುರ್ಗ ಒಕ್ಕೂಟದ ಕಾರ್ಯದರ್ಶಿ ಪಿ.ವಿ.ವೇಣುಗೋಪಾಲನ್, ಎಸ್‍ಎನ್‍ಡಿಪಿ ಯೋಗಂ ವೆಳ್ಳರಿಕುಂಡ್ ಒಕ್ಕೂಟದ ಕಾರ್ಯದರ್ಶಿ ಪಿ.ಆರ್.ಶಶಿಧರನ್ ಉಪಸ್ಥಿತರಿದ್ದರು.




