ನವದೆಹಲಿ: 'ಕೃಷಿ ಕಾನೂನುಗಳನ್ನು ವಿರೋಧಿಸಿ ಹೋರಾಡುವಾಗ ನನ್ನನ್ನು ಬೆದರಿಸಲು ಬಿಜೆಪಿ ನಾಯಕ, ದಿವಂಗತ ಅರುಣ್ ಜೇಟ್ಲಿ ಅವರನ್ನು ನನ್ನ ಬಳಿ ಕಳುಹಿಸಲಾಗಿತ್ತು' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಆರೋಪಿಸಿದರು. ಆದರೆ ಇದನ್ನು ಬಿಜೆಪಿ ನಿರಾಕರಿಸಿದೆ.
ಕಾಂಗ್ರೆಸ್ ಕಾನೂನು ಘಟಕ ಹಮ್ಮಿಕೊಂಡಿದ್ದ 'ಸಾಂವಿಧಾನಿಕ ಸವಾಲುಗಳು: ದೃಷ್ಟಿಕೋನ ಮತ್ತು ಮಾರ್ಗಗಳು' ಕುರಿತ ಸಮಾವೇಶದಲ್ಲಿ ಅವರು ಮಾತನಾಡಿದರು.
'ಕೃಷಿ ಕಾನೂನುಗಳನ್ನು ವಿರೋಧಿಸಿ ಹೋರಾಟವನ್ನು ಮುಂದುವರಿಸಿದರೆ, ತಮ್ಮ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಜೇಟ್ಲಿ ಎಚ್ಚರಿಸಿದ್ದರು' ಎಂದು ಅವರು ಹೇಳಿದರು. ಆದರೆ ಈ ಸಂಭಾಷಣೆ ಯಾವಾಗ ನಡೆಯಿತು ಎಂಬುದರ ವಿವರವನ್ನು ಅವರು ನೀಡಲಿಲ್ಲ.
'ಕೃಷಿ ಕಾನೂನುಗಳ ವಿರುದ್ಧ ಹೋರಾಡುವಾಗ ನಡೆದ ಈ ಮಾತುಕತೆ ನನಗೆ ನೆನಪಿದೆ. ಅವರೀಗ ಬದುಕಿಲ್ಲ. ಆ ವಿಷಯವನ್ನು ನಾನು ಹೇಳಬಾರದು, ಆದರೆ ಹೇಳುತ್ತೇನೆ. ಏನೆಂದರೆ, ಆ ಸಂದರ್ಭದಲ್ಲಿ ನನಗೆ ಬೆದರಿಕೆ ಹಾಕಲು ಅರುಣ್ ಜೇಟ್ಲಿ ಜಿ ಅವರನ್ನು ಕಳುಹಿಸಲಾಗಿತ್ತು. ಹೋರಾಟದ ಹಾದಿಯಲ್ಲಿ ಸಾಗಿದರೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಅವರು ಹೇಳಿದ್ದರು' ಎಂದು ರಾಹುಲ್ ತಿಳಿಸಿದರು.
'ಆಗ ನಾನು ಅವರನ್ನು ನೋಡಿ, ನೀವು ಯಾರ ಜತೆಗೆ ಮಾತನಾಡುತ್ತದ್ದೀರಿ ಎಂಬುದು ನಿಮಗೆ ತಿಳಿದಿಲ್ಲ ಅನಿಸುತ್ತದೆ. ನಾವು ಕಾಂಗ್ರೆಸ್ಸಿಗರು, ಹೇಡಿಗಳಲ್ಲ, ಬಾಗುವುದಿಲ್ಲ. ಬ್ರಿಟಿಷರಿಂದಲೇ ನಮ್ಮನ್ನು ಬಗ್ಗಿಸಲು ಆಗಲಿಲ್ಲ. ಇನ್ನು ನೀವು ಯಾರು? ಎಂದು ಪ್ರಶ್ನಿಸಿದ್ದೆ' ಎಂದು ಅವರು ವಿವರಿಸಿದರು.
ರಾಹುಲ್ ಅವರ ಈ ಆರೋಪಗಳನ್ನು ಬಿಜೆಪಿಯ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಅಲ್ಲಗಳೆದಿದ್ದು, 'ಈ ಹೇಳಿಕೆಗಳು ವಾಸ್ತವಿಕವಾಗಿ ತಪ್ಪು ಮತ್ತು ದಾರಿತಪ್ಪಿಸುವಂತಿವೆ' ಎಂದು 'ಎಕ್ಸ್'ನಲ್ಲಿ ಹೇಳಿದ್ದಾರೆ. ಅದು 'ಸುಳ್ಳು ಸುದ್ದಿ, ಎಚ್ಚರ' ಎಂದೂ ಅವರು ತಿಳಿಸಿದ್ದಾರೆ.
'ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆದ ಹೋರಾಟದ ಸಂದರ್ಭದಲ್ಲಿ ತಮ್ಮ ಧ್ವನಿ ಅಡಗಿಸಲು ಅರುಣ್ ಜೇಟ್ಲಿ ಅವರಿಂದ ಯತ್ನಗಳು ನಡೆದಿದ್ದವು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಆದರೆ ವಾಸ್ತವ ಏನೆಂದರೆ, ಅರುಣ್ ಜೇಟ್ಲಿ ಅವರು 2019ರ ಆಗಸ್ಟ್ 24ರಂದು ನಿಧರನರಾದರು. ಕೃಷಿ ಮಸೂದೆಗಳ ಕರಡನ್ನು 2020ರ ಜೂನ್ 3ರಂದು ಕೇಂದ್ರ ಸಂಪುಟದ ಮುಂದೆ ತರಲಾಯಿತು. ಅವು 2020ರ ಸೆಪ್ಟೆಂಬರ್‌ನಲ್ಲಿ ಕಾನೂನುಗಳಾಗಿ ಜಾರಿಗೆ ಬಂದವು' ಎಂದು ಮಾಳವೀಯ ಮಾಹಿತಿ ನೀಡಿದ್ದಾರೆ.
ಈ ಕಾನೂನುಗಳು ಜಾರಿಯಾದ ಬಳಿಕವಷ್ಟೇ ಆ ಕುರಿತ ಚರ್ಚೆ, ಬೆಂಬಲ, ವಿರೋಧಗಳು ವ್ಯಕ್ತವಾದವು. ಹೀಗಾಗಿ ಅರುಣ್ ಜೇಟ್ಲಿ ಅವರ ಮೂಲಕ ಬೆದರಿಸಲಾಗಿತ್ತು ಎಂಬುದು ವಾಸ್ತವಿಕವಾಗಿ ತಪ್ಪು ಮತ್ತು ದಾರಿತಪ್ಪಿಸುವ ಹೇಳಿಕೆ ಎಂದು ಅವರು ಟೀಕಸಿದ್ದಾರೆ.




