HEALTH TIPS

ಕಚ್ಚಾ ತೈಲ ಖರೀದಿ | ಭಾರತದ ಮೇಲೆ ಅಮೆರಿಕ ನಿರ್ಬಂಧ ನ್ಯಾಯಸಮ್ಮತವಲ್ಲ: ರಷ್ಯಾ

ನವದೆಹಲಿ: ರಷ್ಯಾದ ಕಚ್ಚಾ ತೈಲ ಖರೀದಿಗಾಗಿ ಭಾರತದ ಮೇಲೆ ನಿರ್ಬಂಧ ವಿಧಿಸಿರುವ ಅಮೆರಿಕದ ಕ್ರಮ ನ್ಯಾಯಸಮ್ಮತವಲ್ಲ ಎಂದು ರಷ್ಯಾದ ಹಿರಿಯ ರಾಜತಾಂತ್ರಿಕರೊಬ್ಬರು ಹೇಳಿದ್ದಾರೆ.

ಬಾಹ್ಯ ಒತ್ತಡದ ಹೊರತಾಗಿಯೂ ಭಾರತ-ರಷ್ಯಾ ಇಂಧನ ಸಹಕಾರ ಮುಂದುವರಿಯುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ರಷ್ಯಾ ರಾಯಭಾರ ಕಚೇರಿಯ ಉಪ ಮುಖ್ಯಸ್ಥ ರೋಮನ್‌ ಬಾಬುಷ್ಕಿನ್‌ ತಿಳಿಸಿದ್ದಾರೆ.

ಭಾರತಕ್ಕೆ ಇದು ಸವಾಲಿನ ಪರಿಸ್ಥಿತಿಯಾಗಿದೆ. ಆದರೂ ಭಾರತ ಮತ್ತು ರಷ್ಯಾದ ನಡುವೆ ದೀರ್ಘಕಾಲದ ಸಂಬಂಧ ಇರುತ್ತದೆ ಎಂಬುಂದರ ಬಗ್ಗೆ ನಮಗೆ ನಂಬಿಕೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಷ್ಯಾ ಹಾಗೂ ಉಕ್ರೇನ್ ನಡುವಣ ಯುದ್ಧವನ್ನು ಕೊನೆಗಾಣಿಸಲು ಭಾರತದ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಬಂಧ ವಿಧಿಸಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿಕೆ ನೀಡಿದ್ದಾರೆ.

ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಕ್ಯಾರೋಲಿನ್, 'ಈ ಯುದ್ಧವನ್ನು ಕೊನೆಗಾಣಿಸಲು ಸಾರ್ವಜನಿಕರಿಂದ ಭಾರಿ ಒತ್ತಡವಿತ್ತು. ನೀವು ನೋಡಿರುವಂತೆಯೇ ಭಾರತದ ಮೇಲಿನ ನಿರ್ಬಂಧ ಹಾಗೂ ಇತರೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಯುದ್ಧವನ್ನು ಕೊನೆಗಾಣಿಸಲು ಬಯಸುತ್ತೇವೆ ಎಂದು ಸ್ವತಃ ಟ್ರಂಪ್ ಅವರೇ ನುಡಿದಿದ್ದಾರೆ' ಎಂದು ಹೇಳಿದ್ದಾರೆ.

'ಯಾವುದೇ ಸಭೆ ನಡೆಯುವುದಕ್ಕೂ ಮುನ್ನ ಇನ್ನೊಂದು ತಿಂಗಳು ಕಾಯಬೇಕು ಎಂಬ ಇತರರ ಸಲಹೆಗಳನ್ನು ಅಧ್ಯಕ್ಷರು ತಿರಸ್ಕರಿಸಿದ್ದಾರೆ. ಆದಷ್ಟು ಬೇಗ ಈ ಯುದ್ಧವನ್ನು ಕೊನೆಗಾಣಿಸಲು ಬಯಸಿದ್ದಾರೆ' ಎಂದು ಅವರು ತಿಳಿಸಿದ್ದಾರೆ.

2022ರ ಫೆಬ್ರುವರಿಯಲ್ಲಿ ಉಕ್ರೇನ್ ಮೇಲಿನ ಆಕ್ರಮಣದ ನಂತರ ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ನಿರ್ಬಂಧಗಳನ್ನು ವಿಧಿಸಿದ ಬೆನ್ನಲ್ಲೇ ಭಾರತವು ರಿಯಾಯಿತಿ ದರದಲ್ಲಿ ರಷ್ಯಾದ ತೈಲವನ್ನು ಖರೀದಿಸಲು ಆರಂಭಿಸಿತ್ತು.

ಇದರ ಪರಿಣಾಮವಾಗಿ 2019-20 ರಲ್ಲಿ ಒಟ್ಟು ತೈಲ ಆಮದುಗಳಲ್ಲಿ ಶೇ 1.7ರಷ್ಟಿದ್ದ ರಷ್ಯಾದ ಪಾಲು 2024-25 ರಲ್ಲಿ ಶೇಕಡಾ 35.1ಕ್ಕೆ ಏರಿಕೆ ಕಂಡಿತು. ಈಗ ರಷ್ಯಾವು ಭಾರತಕ್ಕೆ ಅತಿದೊಡ್ಡ ತೈಲ ಪೂರೈಕೆದಾರ ದೇಶವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries