ಮಂಜೇಶ್ವರ: ವರ್ಕಾಡಿ ಪ್ರದೇಶದಲ್ಲಿ ರಾತ್ರಿ ವೇಳೆ ಬೇಟೆಯಾಡಲು ಆಗಮಿಸಿದ್ದ ನಿತಿನ್‍ರಾಜ್ ಮತ್ತು ಈತನ ಸ್ನೇಹಿತರನ್ನು ಅಪಹರಿಸಿ ಮೂರು ಲಕ್ಷ ರೂ. ಹಣಕ್ಕಾಗಿ ಬೇಡಿಕೆಯಿರಿಸಿ ಹಲ್ಲೆ ನಡೆಸಿದ್ದ ನಾಲ್ಕು ಮಂದಿ ಹಾಗೂ ನಕಲಿ ಬಂದೂಕು ಕೈವಶವಿರಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಸೇರಿದಂತೆ ಒಟ್ಟು ಏಳು ಮಂದಿಯನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಂಗಡಿಪದವು ನಿವಾಸಿ ಸೈಫುದ್ದೀನ್ ಯಾನೆ ಪೂಚ್ಚ ಸೈಫುದ್ದೀನ್, ಈತನ ಸಹಚರರಾದ ಎಂ.ಎಚ್ ಮೊಯ್ದೀನ್, ಉಳಿಯತ್ತಡ್ಕದ ಮಹಮ್ಮದ್ ಸುಹೈಲ್, ಮಹಮ್ಮದ್ ಅಮೀರ್ ಹಾಗೂ ನಕಲಿ ಬಂದೂಕು ಹಾಗೂ ಮದ್ದುಗುಂಡು ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿ ನಿತಿನ್‍ರಾಜ್, ರತೀಶ್ ಎಚ್ ಹಾಗೂ ಪ್ರವಿತ್ ಸಿ.ಆರ್ ಎಂಬವರನ್ನು ಬಂಧಿಸಲಾಗಿದೆ.
ಶುಕ್ರವಾರ ತಡರಾತ್ರಿ ವರ್ಕಾಡಿ ಮಜೀರ್‍ಪಳ್ಳ ಪ್ರದೇಶದಲ್ಲಿ ನಿತಿನ್‍ರಾಜ್ ಮತ್ತು ಸ್ನೇಹಿತರು ಸಂಚರಿಸುತ್ತಿದ್ದ ಕಾರು ತಡೆದ ತಂಡ, ಅವರ ವಶದಲ್ಲಿದ್ದ ಬಂದೂಕು ಹಾಗೂ ಮದ್ದುಗುಂಡು, ಮೊಬೈಲ್, ಹತ್ತು ಸಾವಿರ ರೂ. ನಗದು ಕಸಿದು, ನಂತರ ಈ ಮೂವರನ್ನೂ ಕಾರಿನಲ್ಲಿ ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮೂರು ಲಕ್ಷ ರೂ. ನೀಡುವಂತೆ ಬೆದರಿಕೆಯೊಡ್ಡಿ ಹಲ್ಲೆ ನಡೆಸಿರುವುದಾಗಿ ನಿತಿನ್‍ರಾಜ್ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಇನ್ಸ್‍ಪೆಕ್ಟರ್ ಇ. ಅನೂಪ್‍ಕುಮಾರ್ ನೇತೃತ್ವದ ಪೊಲೀಸರ ತಮಡ ಕಾರ್ಯಾಚರಣೆ ನಡೆಸಿತ್ತು. ಬಂಧಿತರಲ್ಲಿ ಸೈಫುದ್ದೀನ್ ಕಾಪಾ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ನಕಲಿ ಬಂದೂಕು ಕೈವಶವಿರಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ನಿತಿನ್‍ರಾಜ್ ಮತ್ತು ಈತನ ಸ್ನೇಹಿತರನ್ನು ಬಂಧಿಸಲಾಗಿದೆ.




