HEALTH TIPS

ಶ್ರೀಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯಕ್ಕೆ ಧಕ್ಕೆ-ಭಕ್ತವೃಂದ, ಅಭಿಮಾನಿಗಳ ಸಮಾಲೋಚನಾ ಸಭೆ

ಕಾಸರಗೋಡು: ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತವೃಂದ ಹಾಗೂ ಅಭಿಮಾನಿಗಳ ಸಮಾಲೋಚನಾ ಸಭೆ ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಪ್ರತಿಷ್ಠಾನದ ಸಾಂಸ್ಕøತಿಕ ಭವನದಲ್ಲಿ ನಡೆಯಿತು. ಭಕ್ತರು ಹಾಗೂ ಗಣ್ಯರ ಸಲಹೆ ಸೂಚನೆಗಳನ್ನು ಪಡೆದು, ಚರ್ಚಿಸಿ, ಶ್ರೀ ಕ್ಷೇತ್ರ ಹಾಗೂ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಮಾನಹಾನಿಕರವಾಗಿ ವರ್ತಿಸುವವರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು.

ಧರ್ಮ, ದಾನ, ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿರುವ ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯ ಹಾಗೂ ಪರಂಪರೆಯನ್ನು ಕಾಪಾಡಿ, ಅದಕ್ಕೆ ಶಕ್ತಿಶಾಲಿ ಬೆಂಬಲ ನೀಡುವ ಉದ್ದೇಶದಿಂದ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಜಿಲ್ಲೆಯ ವಿವಿಧ ದೇವಸ್ಥಾನ, ಮಠಗಳ ಪ್ರತಿನಿಧಿಗಳು, ಹಿಂದೂ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.

ಸಿರಿಬಾಗಿಲು ಪ್ರತಿಷ್ಠಾನದ ಅದ್ಯಕ್ಷ ರಾಮಕೃಷ್ಣ ಮಯ್ಯ ಅಧ್ಯಕ್ಷತೆ ವಹಿಸಿದ್ದರು.   ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತೊಡಿ ಅವರು ಪ್ರಸ್ತಾವಿಕ ಭಾಷಣ ಮಾಡಿದರು.  ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಮುಖ್ಯ ಭಾಷಣ ಮಾಡಿ, ಧರ್ಮಸ್ಥಳದ ಸಮೃದ್ಧ ಇತಿಹಾಸ, ಕ್ಷೇತ್ರದ ಧರ್ಮದಾನ ಪರಂಪರೆ ಹಾಗೂ ಶ್ರೀ ಮಂಜುನಾಥಸ್ವಾಮಿಯ ಮಹಿಮೆಯನ್ನು ಉಲ್ಲೇಖಿಸಿ, ಧರ್ಮಸ್ಥಳವು ನಮ್ಮ ನಂಬಿಕೆಯ ಪ್ರಕಾಶಕೇಂದ್ರ. ಅದರ ಪಾವಿತ್ರ್ಯವನ್ನು ಕಾಪಾಡುವುದು ಪ್ರತಿಯೊಬ್ಬ ಭಕ್ತನ ಕರ್ತವ್ಯವಾಗಬೇಕು ಎಂದು ತಿಳಿಸಿದರು. ಜಿಲ್ಲಾ ಐಕ್ಯವೇದಿ ಜಿಲ್ಲಾಧ್ಯಕ್ಷ ಎಸ್.ಪಿ ಶಾಜಿ, ವಿಹಿಂಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ್ ಮಾವಿನಕಟ್ಟೆ, ಅಖಿಲೇಶ್ ನಗುಮುಗಂ, ರಾಘವೇಂದ್ರ ಬದಿಯಡ್ಕ ಹಾಗೂ ಕಿರಣ್ ಪ್ರಸಾದ್ ಕೂಡ್ಲುಮೊದಲಾದವರು ಉಪಸ್ಥಿತರಿದ್ದರು. 

ಸಭೆಯಲ್ಲಿ 25 ಸದಸ್ಯರ ಅಡ್‍ಹಾಕ್ ಸಮಿತಿಯನ್ನು ರಚಿಸಲಾಗಿದ್ದು, ಶ್ರೀ ರಾಜನ್ ಮುಳಿಯಾರ್ ಅವರನ್ನು ಸಂಯೋಜಕರಾಗಿ ಹಾಗೂ ಗಣೇಶ್ ಮಾವಿನಕಟ್ಟೆ ಅವರನ್ನು ಸಹ ಸಂಯೋಜಕರಾಗಿ ಆಯ್ಕೆ ಮಾಡಲಾಯಿತು. ಮುಂದಿನ ದಿನಗಳಲ್ಲಿ ಮಹತ್ತರ ಪ್ರತಿಭಟನೆಗಳಿಗೆ ನೇತೃತ್ವ ನೀಡುವ ನಿಟ್ಟಿನಲ್ಲಿ 1001 ಮಂದಿ  ಸದಸ್ಯರ ಪ್ರತಿಭಟನಾ ಸಮಿತಿ ರಚಿಸಿ, ಕಾಸರಗೋಡು ನಗರದಿಂದ ಉಳಿಯತ್ತಡ್ಕವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ತೀರ್ಮಾನಿಸಲಾಯಿತು. ಸೆಪ್ಟೆಂಬರ್ 8ರಂದು  ಎಡನೀರು ಮಠಧೀಶರಾದ ಜಗದ್ಗುರು ಶ್ರೀ  ಸಚ್ಚಿದಾನಂದ ಭಾರತಿ ಸ್ವಾಮಿಜಿಗಳ ಮುಂದಾಳುತ್ವದಲ್ಲಿ ಶ್ರೀಮಠದಿಂದ ಧರ್ಮಸ್ಥಳದವರೆಗೆ ಹಮ್ಮಿಕೊಳ್ಳುವ ಬೃಹತ್ ವಾಹನ ಜಾಥಾ "ಚಲೋ ಧರ್ಮಸ್ಥಳ" ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಜಗದೀಶ ಕೂಡ್ಲು ಸ್ವಾಗತಿಸಿದರು. ಹಿಂದೂ ಐಕ್ಯವೇದಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ರಾಜನ್ ಮುಳಿಯಾರ್  ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries