ಕಾಸರಗೋಡು: ಲಾರಿಯಲ್ಲಿ ಸಾಗಿಸುತ್ತಿದ್ದ ಸಿಎನ್‍ಜಿ ಗ್ಯಾಸ್ ಸಿಲಿಂಡರ್‍ಗಳಲ್ಲಿ ಸೋರಿಕೆ ಕಂಡುಬಂದಿದ್ದು, ತಕ್ಷಣ ಅಗ್ನಿಶಾಮಕ ದಳ ನಡೆಸಿದ ಕಾರ್ಯಾಚರಣೆಯಿಂದ ಸಂಭಾವ್ಯ ದುರಂತ ತಪ್ಪಿದೆ. ಅದಾನಿ ಗ್ರೂಪ್ ಆಫ್ ಕಂಪೆನಿಯ ಸಿಎನ್‍ಜಿ ಅನಿಲ ತಂಬಿಸಿದ್ದ ಸಿಲಿಂಡರ್‍ಗಳನ್ನು ಲಾರಿಯಲ್ಲಿ ಹೊಸದುರ್ಗ ಮಾವುಂಗಾಲ್‍ನಿಂದ ಕಾಸರಗೋಡಿಗೆ ಸಾಗಿಸುತ್ತಿರುವ ಮಧ್ಯೆ ಬೇಕಲ ತ್ರಿಕ್ಕನ್ನಾಡ್ ಸನಿಹ ಸಿಲಿಂಡರ್‍ನಲ್ಲಿ ಸೋರಿಕೆ ಕಂಡು ಬಂದಿತ್ತು. ಲಾರಿಯಲ್ಲಿ 40ಸಿಲಿಂಡರ್ ಒಳಗೊಂಡಿದ್ದು, ಅನಿಲ ಸೋರಿಕೆಯನ್ನು ಲಾರಿ ಚಾಲಕ ಗಮನಿಸಿದ ಹಿನ್ನೆಲೆಯಲ್ಲಿ ರಸ್ತೆಬದಿ ನಿಲ್ಲಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದನು. ಕಾಸರಗೋಡು ಅಗ್ನಿಶಾಮಕ ದಳದ ಮೂರು ಇಂಜಿನ್‍ಗಳು ಘಟನಾ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಮಧ್ಯೆ ಎರಡು ಸಿಲಿಂಡರ್‍ಗಳಲ್ಲಿನ ಗ್ಯಾಸ್ ಸೋರಿಕೆಯಿಂದ ಖಾಲಿಯಾಗಿತ್ತು. ಗ್ಯಾಸ್ ಸೋರಿಕೆ ಸಂದರ್ಭ ಬೆಂಕಿಯ ಸಂಪರ್ಕ ಲಭಿಸದಿರುವುದರಿಂದ ಅನಾಹುತ ತಪ್ಪಿತ್ತು. ಬೇಕಲ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯದಲ್ಲಿ ಸಹಕರಿಸಿದ್ದರು.

