HEALTH TIPS

ಮತಕಳ್ಳತನ ಬಗ್ಗೆ ಚರ್ಚೆ | ವಿಪಕ್ಷಗಳು ಹಿಂದೆ ಸರಿಯುವುದಿಲ್ಲ: ಕಾಂಗ್ರೆಸ್

ನವದೆಹಲಿ: ಚುನಾವಣಾ ಆಯೋಗದ ಮತಕಳ್ಳತನ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಚರ್ಚೆ ನಡೆಸುವ ವಿರೋಧ ಪಕ್ಷಗಳ ಬೇಡಿಕೆ ಅಚಲವಾಗಿದೆ ಎಂದು ಕಾಂಗ್ರೆಸ್ ಬುಧವಾರ ಹೇಳಿದೆ.

ಬಿಹಾರದ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ ಬಗ್ಗೆ ಚರ್ಚೆಗೆ ವಿರೋಧ ಪಕ್ಷಗಳು ಪಟ್ಟು ಹಿಡಿದಿರುವುದರಿಂದ ಸದನದ ಕಲಾಪಗಳಿಗೆ ಅಡ್ಡಿಯಾಗಿವೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್‌ನ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈ ರಾಮ್ ರಮೇಶ್, 'ಚುನಾವಣಾ ಆಯೋಗದ ಯಾವುದೇ ವಿಷಯವನ್ನು ಸಂಸತ್ತಿನಲ್ಲಿ ಚರ್ಚೆ ಮಾಡುವಂತಿಲ್ಲ ಎನ್ನುವ 1988 ಡಿಸೆಂಬರ್ 14ರಂದು ಲೋಕಸಭಾ ಸ್ಪೀಕರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ನಿನ್ನೆ ರಾಜ್ಯಸಭೆಯ ಉಪಸಭಾಪತಿ ರೂಲಿಂಗ್ ನೀಡಿದ್ದಾರೆ. ಆದರೆ, ಒಂದು ವಿಷಯ ಬಿಟ್ಟು ಜಗತ್ತಿನ ಯಾವುದೇ ವಿಷಯವನ್ನು ರಾಜ್ಯಸಭೆಯಲ್ಲಿ ಚರ್ಚಿಸಬಹುದು ಮೋದಿಯವರೇ ನೇಮಕ ಮಾಡಿದ ರಾಜ್ಯಸಭೆ ಸಭಾಪತಿ 2023ರ ಜುಲೈ 1 ರಂದು ರೂಲಿಂಗ್ ನೀಡಿದ್ದರು' ಎಂದು ಅವರು ಬರೆದುಕೊಂಡಿದ್ದಾರೆ.

'ವಾಗ್ದಂಡನೆ ಹೊರತುಪಡಿಸಿ ನ್ಯಾಯಮೂರ್ತಿಗಳ ಹೇಳಿಕೆ ಬಗ್ಗೆ ರಾಜ್ಯಸಭೆಯಲ್ಲಿ ಚರ್ಚಿಸಬಾರದು. ನ್ಯಾಯಾಂಗ ನಿಂದನೆ ಪರಿಕಲ್ಪನೆಯನ್ನು ಸಂಪೂರ್ಣವಾಗಿ ತಪ್ಪಾಗಿ ಗ್ರಹಿಸಲಾಗಿದೆ' ಎಂದು ಅವರು ಹೇಳಿದ್ದಾರೆ ಎಂದು ರಮೇಶ್ ಉಲ್ಲೇಖಿಸಿದ್ದಾರೆ.

ಸಂಸತ್ತು ರೂಲಿಂಗ್ ಮತ್ತು ನಿಯಮಗಳ ಆಧಾರದಲ್ಲಿ ನಡೆಯುತ್ತದೆ ಎನ್ನುವುದನ್ನು ವಿರೋಧ ಪಕ್ಷಗಳು ನಿರಂತರವಾಗಿ ನೆನಪಿಸುತ್ತಿರುತ್ತವೆ ಎಂದು ಅವರು ಹೇಳಿದರು.

'2023 ಜುಲೈ 21ರ ರಾಜ್ಯಸಭಾ ಸಭಾಪತಿಯ ರೂಲಿಂಗ್ ಅನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ' ಎಂದು ರಮೇಶ್ ಪ್ರಶ್ನಿಸಿದ್ದಾರೆ.

ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಉಭಯ ಸದನಗಳಲ್ಲಿ ವಿರೋಧ ‍ಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದು, ಚುನಾವಣಾ ಆಯೋಗವು ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿವೆ. ಈ ಬಗ್ಗೆ ಚರ್ಚೆ ನಡೆಸಬೇಕು ಎಂದು ಉಭಯ ಸದನಗಳಲ್ಲಿಯೂ ವಿರೋಧ ಪಕ್ಷಗಳು ಪಟ್ಟು ಹಿಡಿದಿವೆ.

ಬಿಹಾರದಲ್ಲಿ ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆಯ ಬಗ್ಗೆ ಚರ್ಚಿಸಲು ಸರ್ಕಾರಕ್ಕೆ ಸವಾಲು ಹಾಕಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಸದನವು ಸುಗಮವಾಗಿ ನಡೆಯಲು ಸಾಧ್ಯವಾಗುತ್ತಿಲ್ಲ ಎಂಬುದು ಆಡಳಿತ ಪಕ್ಷದ ದೌರ್ಬಲ್ಯದ ದ್ಯೋತಕವಾಗಿದೆ ಎಂದು ಮಂಗಳವಾರ ಹೇಳಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries