ಬದಿಯಡ್ಕ: ಕುಂಬಳೆ-ಬದಿಯಡ್ಕ-ಮುಳ್ಳೇರಿಯ ಕೆಎಸ್‍ಟಿಪಿ ರಸ್ತೆಯ ಕನ್ಯಪ್ಪಾಡಿ ಸನಿಹದ ಪಡಿಪ್ಪುರೆ ಎಂಬಲ್ಲಿ ಸರಕುಸಾಗಾಟದ ಲಾರಿಯೊಂದು ಮಗುಚಿಬಿದ್ದು ಲಾರಿ ಚಾಲಕ ಹಾಗೂ ಸಹಚಾಲಕ ಪವಾಡಸದ್ರಶ ರೀತಿಯಲ್ಲಿ ಪಾರಾಗಿದ್ದಾರೆ. ಕುಂಬಳೆಯಿಂದ ಬದಿಯಡ್ಕ ಭಾಗಕ್ಕೆ ಮೊಟ್ಟೆ ಸಾಗಿಸುತ್ತಿದ್ದ ತಮಿಳ್ನಾಡು ನೋಂದಾವಣೆಯ ಲಾರಿ ರಸ್ತೆ ಅಂಚಿಗಿರುವ ವ್ಯಕ್ತಿಯೊಬ್ಬರ ಅಂಗಳದ ಆವರಣಗೋಡೆಗೆ ಮಗುಚಿ ಬಿದ್ದಿದೆ.
ಕೆಎಸ್‍ಟಿಪಿ ರಸ್ತೆ ಅಭಿವೃದ್ಧಿಕಾರ್ಯದ ಸಂದರ್ಭ ಪಡಿಪ್ಪಿರೆ ಪ್ರದೇಶದ ಕಡಿದಾದ ತಿರುವಿನಲ್ಲಿ ರಸ್ತೆ ಅಗಲಗೊಳಿಸದೆ, ಡಾಂಬರೀಕರಣ ನಡೆಸಲಾಗಿದ್ದು, ಇಲ್ಲಿನ ಆಂಗ್ಲ ಅಕ್ಷರ'ಜೆಡ್'ಆಕಾರದಲ್ಲಿರುವ ರಸ್ತೆಯಿಂದ ವಾಹನ ಚಾಲಕರ ಪಾಲಿಗೆ ನಿತ್ಯ ಸಂಕಷ್ಟ ಎದುರಾಗುತ್ತಿದೆ. ರಸ್ತೆ ಅಂಚಿಗಿರುವ ಕೃಷಿಭೂಮಿಯನ್ನು ಉಳಿಸಿಕೊಳ್ಳುವ ಪ್ರಯತ್ನದಿಂದ ಇಲ್ಲಿ ರಸ್ತೆ ಅಗಲೀಕರಣಕ್ಕೆ ತೊಡಕಾಗಿ ಪರಿಣಮಿಸುತ್ತಿದೆ. ರಸ್ತೆಗೆ ಅಗತ್ಯ ಜಾಗ ಲಭಿಸಿದಲ್ಲಿ, ಇಲ್ಲಿನ ಕಡಿದಾದ ತಿರುವಿಗೆ ಮೋಕ್ಷ ಲಭಿಸುವುದರ ಜತೆಗೆ ಅಪಘಾತಕ್ಕೂ ಕಡಿವಾಣಹಾಕಲು ಸಾಧ್ಯವಾಘಲಿದೆ.





