HEALTH TIPS

ಮಸೂದೆಗಳ ನಿರ್ವಹಣೆಯಲ್ಲಿ ರಾಷ್ಟ್ರಪತಿ, ರಾಜ್ಯಪಾಲರ ಕ್ರಮಗಳ ವಿರುದ್ಧ ರಾಜ್ಯಗಳು ಸುಪ್ರೀಮ್‌ನಲ್ಲಿ ಅರ್ಜಿ ಸಲ್ಲಿಸುವಂತಿಲ್ಲ: ಕೇಂದ್ರ ಸರ್ಕಾರ

ನವದೆಹಲಿ: ಮೂಲಭೂತ ಹಕ್ಕುಗಳ ಉಲ್ಲಂಘನೆಯನ್ನು ಆರೋಪಿಸಿ ರಾಜ್ಯ ಸರ್ಕಾರಗಳು ವಿಧಾನಸಭೆಗಳಲ್ಲಿ ಅಂಗೀಕೃತ ಮಸೂದೆಗಳನ್ನು ನಿರ್ವಹಿಸುವಲ್ಲಿ ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರ ಕ್ರಮಗಳ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಗಳನ್ನು ಸಲ್ಲಿಸುವಂತಿಲ್ಲ ಎಂದು ಕೇಂದ್ರವು ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ರಾಜ್ಯಗಳು ಸಂವಿಧಾನದ ಮೂಲಭೂತ ಹಕ್ಕುಗಳ ಉಲ್ಲಂಘನೆಗಾಗಿ ವಿಧಿ 32ರಡಿ ರಿಟ್ ಅರ್ಜಿಗಳನ್ನು ಸಲ್ಲಿಸಲು ಸಾಧ್ಯವೇ ಎನ್ನುವುದರ ಕುರಿತು ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯವನ್ನು ತಿಳಿಯಲು ರಾಷ್ಟ್ರಪತಿಗಳು ಬಯಸಿದ್ದಾರೆ ಎಂದು ಕೇಂದ್ರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ತಿಳಿಸಿದರು.

ರಾಷ್ಟ್ರಪತಿಗಳು ಅಥವಾ ರಾಜ್ಯಪಾಲರು ತಮ್ಮ ಹುದ್ದೆಯ ಅಧಿಕಾರಗಳು ಮತ್ತು ಕರ್ತವ್ಯಗಳ ನಿರ್ವಹಣೆಗಾಗಿ ಅಥವಾ ತಾವು ಕೈಗೊಂಡ ಯಾವುದೇ ಕ್ರಮಕ್ಕಾಗಿ ಯಾವುದೇ ನ್ಯಾಯಾಲಯಕ್ಕೆ ಉತ್ತರದಾಯಿಗಳಲ್ಲ ಎಂದು ಹೇಳಿರುವ ಸಂವಿಧಾನದ ವಿಧಿ 361ರ ವ್ಯಾಪ್ತಿಯ ಕುರಿತೂ ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯವನ್ನು ರಾಷ್ಟ್ರಪತಿಗಳು ತಿಳಿಯಲು ಬಯಸಿದ್ದಾರೆ ಎಂದು ಅವರು ತಿಳಿಸಿದರು.

ರಾಷ್ಟ್ರಪತಿಗಳ ಉಲ್ಲೇಖಕ್ಕೆ ಸಂಬಂಧಿಸಿದಂತೆ ಈ ಪ್ರಶ್ನೆಗಳನ್ನು ಚರ್ಚಿಸಲಾಗಿದೆ,ಆದರೂ ಭವಿಷ್ಯದಲ್ಲಿ ಈ ಸಮಸ್ಯೆ ಉದ್ಭವಿಸಬಹುದಾದ್ದರಿಂದ ನಿಖರವಾದ ಕಾನೂನಿನ ಸ್ಥಿತಿಯನ್ನು ತಿಳಿದುಕೊಳ್ಳಲು ರಾಷ್ಟ್ರಪತಿಗಳು ಈ ನ್ಯಾಯಾಲಯದ ಅಭಿಪ್ರಾಯವನ್ನು ತಿಳಿಯಲು ಬಯಸಿದ್ದಾರೆ ಎಂದು ಹೇಳಿದ ಮೆಹ್ತಾ, ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ಕ್ರಮದ ವಿರುದ್ಧ ರಾಜ್ಯ ಸರಕಾರದಿಂದ ವಿಧಿ 32ರಡಿ ರಿಟ್ ಅರ್ಜಿಯು ಅಂಗೀಕಾರರ್ಹವಲ್ಲ,ಅವರಿಗೆ ಯಾವುದೇ ನಿರ್ದೇಶನವನ್ನು ಹೊರಡಿಸುವಂತಿಲ್ಲ ಮತ್ತು ಮಸೂದೆಗಳ ನಿರ್ವಹಣೆಯಲ್ಲಿ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ಕ್ರಮವು ನ್ಯಾಯಾಲಯದಲ್ಲಿ ಪ್ರಶ್ನಾರ್ಹವಲ್ಲ, ಆದ್ದರಿಂದ ಇಂತಹ ಅರ್ಜಿಯನ್ನು ಸಲ್ಲಿಸುವಂತಿಲ್ಲ ಎಂದು ವಾದಿಸಿದರು.

ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡಲು ಕಾಲಮಿತಿಯನ್ನು ರಾಜ್ಯಪಾಲರು ಅನುಸರಿಸದಿದ್ದರೆ ನೇರವಾಗಿ ಸರ್ವೋಚ್ಚ ನ್ಯಾಯಾಲಯವನ್ನು ಸಂಪರ್ಕಿಸಲು ರಾಜ್ಯಗಳಿಗೆ ಸ್ವಾತಂತ್ರ್ಯವನ್ನು ನೀಡಿರುವ ಎ.8ರ ತಮಿಳುನಾಡು ತೀರ್ಪನ್ನು ಮೆಹ್ತಾ ಉಲ್ಲೇಖಿಸಿದರು.

'ಎ.8ರ ಇಬ್ಬರು ನ್ಯಾಯಾಧೀಶರ ತೀರ್ಪಿನ ಬಗ್ಗೆ ನಾವು ಪ್ರತಿಕ್ರಿಯಿಸುವುದಿಲ್ಲ' ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಗವಾಯಿ, ರಾಜ್ಯಪಾಲರು ಆರು ತಿಂಗಳ ಕಾಲ ಮಸೂದೆಗಳನ್ನು ಮೂಲೆಗುಂಪು ಮಾಡುವುದು ಸಮರ್ಥನೀಯವಲ್ಲ ಎಂದು ಹೇಳಿದರು.

ರಾಜ್ಯ ಸರಕಾರಗಳು ಅಂಗೀಕರಿಸಿದ ಮಸೂದೆಗಳನ್ನು ನಿರ್ವಹಿಸಲು ನ್ಯಾಯಾಲಯವು ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಕಾಲಮಿತಿಯನ್ನು ವಿಧಿಸಬಹುದೇ ಎಂಬ ಅಧ್ಯಕ್ಷೀಯ ಉಲ್ಲೇಖದ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries