ಕಾಸರಗೋಡು: ಬುಡಕಟ್ಟು ಸಮುದಾಯದ ಅಂತಾರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ಕುಟುಂಬಶ್ರೀ ಆಶ್ರಯದಲ್ಲಿ ಕುತ್ತಿಕೋಲ್ ಗ್ರಾಮ ಪಂಚಾಯತ್‍ನ ಸೋಪಾನಂ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿದ್ದ 'ಜನ್ ಗಲ್ಸಾ'ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಶಾಸಕ ಸಿ.ಎಚ್.ಕುಂಜಂಬು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಕಲೆ ಮತ್ತು ಸಾಹಿತ್ಯವು ಮಣ್ಣಿನಲ್ಲಿ ಬೆರೆತು ಕೆಲಸ ಮಾಡುವವರಿಗೆ ಸೇರಿದ್ದಾಗಿದೆ. ಇದಕ್ಕಾಗಿಯೇ ಕುಟುಂಬಶ್ರೀ ನೇತೃತ್ವದಲ್ಲಿ ಬುಡಕಟ್ಟುಕಲಾ ಪ್ರಕಾರಗಳನ್ನು ಪುನರುಜ್ಜೀವನಗೊಳಿಸಲು 'ಜನ ಗಲ್ಸಾ' ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಪರಿಶಿಷ್ಟ ಪಂಗಡಗಳ ಮಕ್ಕಳ ಶಿಕ್ಷಣ ಸೇರಿದಂತೆ ಈ ಸಮುದಾಯದ ಪ್ರಗತಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದರು.
ಕುತ್ತಿಕೋಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಮುರಳಿ ಪಯ್ಯಂಗಾನಂ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಅಕಾಡೆಮಿಯಿಂದ ಮನ್ನಣೆ ಪಡೆದ ಗ್ರಾಮದ ಹಿರಿಯರಾದ ಲೇಖಾ ಪಳ್ಳಿಕೊಚ್ಚಿ, ವಿನೀತಾ ತುಂಬತೆಟ್ಟು, ಸತಿ ಮಾಧವನ್ ಕಮ್ಮಾಡಿ, ಚೆನಿಯನ್ ಪುಲಿವಂಚಿ, ಅಂಬಾಡಿ ಕುಟ್ಟಿಕೋಲ್, ಸುನಿಲ್ ಪಿ.ಬಾನಂ, ಸುರೇಶ್ ಪಾಯಂ ಅವರನ್ನು ಶಾಸಕ ಸಿ.ಎಚ್ ಕುಞಂಬು ಸನ್ಮಾನಿಸಿದರು ಕಾಸರಗೋಡು ಜಿಲ್ಲೆಯಲ್ಲಿ ಜಾರಿಗೆ ತರಲಾಗುತ್ತಿರುವ ಕೊರಗ ಯೋಜನೆಯ ಅಂಗವಾಗಿ ಬಿಡುಗಡೆಯಾಗಲಿರುವ ಲಿಟಲ್ ಪಬ್ಲಿಕೇಶನ್ಸ್‍ನ ಲಾಂಛನವನ್ನು ಕುಟುಂಬಶ್ರೀ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ದಿನೇಶನ್ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಅಂಚಲ್ ಕೃಷ್ಣ ಕುಮಾರ್ ಬಿಡುಗಡೆಗೊಳಿಸಿದರು.
ಕುತ್ತಿಕೋಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕೆ.ಶೋಭನ ಕುಮಾರಿ, ಕರಡುಕ್ಕ ಬ್ಲಾಕ್ ಪಂಚಾಯಿತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸವಿತಾ ಪಿ , ಡಿಪಿಸಿ ಸರ್ಕಾರಿ ನಾಮನಿರ್ದೇಶಿತ ವಕೀಲ ರಾಮಚಂದ್ರನ್, ಬೇಡಡ್ಕ ಗ್ರಾ.ಪಂ. ಉಪಾಧ್ಯಕ್ಷ ಎ.ಮಾಧವನ್, ಕುಟುಂಬಶ್ರೀ ಕಾರ್ಯಕ್ರಮಾಧಿಕಾರಿ ಡಾ.ಬಿ.ಶ್ರೀಜಿತ್, ವಿವಿಧ ಸಿಡಿಎಸ್ ಅಧ್ಯಕ್ಷರು ಉಪಸ್ಥಿತರಿದ್ದರು. ಕುತ್ತಿಕೋಲ್ ಗ್ರಾಮ ಪಂಚಾಯತ್ ಸಿಡಿಎಸ್ ಅಧ್ಯಕ್ಷೆ ರೀನಾ ಸಿ ವಂದಿಸಿದರು.





