ಕಾಸರಗೋಡು: ಬಡತನ ನಿರ್ಮೂಲನೆ ಹಾಗೂ ಮಹಿಳಾ ಸ್ವಾವಲಂಬೀ ಯೋಜನೆಯನ್ವಯ ಕೇರಳದಲ್ಲಿ ಆರಂಭಿಸಲಾಗಿರುವ ಕುಟುಂಬಶ್ರೀ ಸಂಘಟನೆ ರಾಜ್ಯದಲ್ಲಿ ಸಾಮಾಜಿಕ ಕ್ರಾಂತಿಗೆ ಕಾರಣವಾಗಿರುವುದಾಗಿ ಕೇರಳ ರಾಜ್ಯ ಕುಟುಂಬಶ್ರೀ ಮುಖ್ಯ ನಿರ್ದೇಶಕ ಎಚ್. ದಿನೇಶನ್ ಐಎಎಸ್ ತಿಳಿಸಿದ್ದಾರೆ.
ಅವರು ಕುಟುಂಬಶ್ರೀ ಕಾಸರಗೋಡು ಜಿಲ್ಲಾ ಸಮಿತಿ ಕಾಸರಗೋಡು ಪ್ರೆಸ್‍ಕ್ಲಬ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಮಾಧ್ಯಮ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕುಟುಂಬಶ್ರೀಯಿಂದ ಮಹಿಳೆಯರ ಆರ್ಥಿಕ ಮಟ್ಟ ಸುಧಾರಿಸುವುದರ ಜತೆಗೆ ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಸದೃಢರಾಗಲು ಸಾಧ್ಯವಾಗಿದೆ. ಪ್ರಸಕ್ತ 58ಲಕ್ಷ ಮಂದಿ ಕುಟುಂಬಶ್ರೀಯಲ್ಲಿ ಸದಸ್ಯರಿದ್ದು, 3.77ಲಕ್ಷ ನೆರೆಕರೆ ಕೂಟ ಅಸ್ತಿತ್ವದಲ್ಲಿದೆ. ಕೇರಳದ ಕುಟುಂಬಶ್ರೀಯ ಬೆಳವಣಿಗೆ ಬಗ್ಗೆ ದೇಶದ ನಾನಾ ರಾಜ್ಯಗಳಿಂದ ಅಧ್ಯಯನನಡೆಸಲು ನಿಯೋಗ ಆಗಮಿಸುತ್ತಿದ್ದು, ಕೇರಳ ಇಂದು ದೇಶಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ವಾರ್ತಾ ಮತ್ತು ಮಾಹಿತಿ ಅಧಿಕಾರಿ ಮಧುಸೂದನನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕುಟುಂಬಶ್ರೀ ಮಿಷನ್ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಅಂಜಾಲ್ ಕೃಷ್ಣ ಕುಮಾರ್ ಮುಖ್ಯ ಭಾಷಣ ಮಾಡಿದರು. ವಲಿಯಪರಂಬ ಗ್ರಾಪಂ ಅಧ್ಯಕ್ಷ ಸಜೀವನ್ ವಿ.ವಿ, ಯಾತ್ರಶ್ರೀ ಪ್ರಬಂಧಕಿ ರಮ್ಯಾ, ಪ್ರೆಸ್‍ಕ್ಲಬ್ ಕಾರ್ಯದರ್ಶಿ ಪ್ರದೀಪ್ ನಾರಾಯಣ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕುಟುಂಬಶ್ರೀ ಆರಂಭ, ಇದರ ಬೆಳವಣಿಗೆ ಹಾಗೂ ಯೋಹನೆಗಳ ಬಗ್ಗೆ ಡಾ. ಎಂ.ಕೆ ರಾಜಶೇಖರನ್, ಮಾಯಾ ಶಶಿಧರನ್, ದೀಪಾ ಎಸ್ ನಾಯರ್ ತ್ರಿಶ್ಯೂರ್, ಎಡಿಎಂಸಿಗಳಾದ ಹರಿದಾಸ್ ಡಿ, ಇಕ್ಬಾಲ್ ಇಸ.ಎಚ್. ಕಿಶೋರ್ ಕುಮಾರ್ ಕೆ.ಎಂ ತರಗತಿ ನಡೆಸಿದರು. ಕುಟುಂಬಶ್ರೀ ಜಿಲ್ಲಾ ಕೋರ್ಡಿನೇಟರ್ ರತೀಶ್ ಕುಮಾರ್ ಕೆ. ಸ್ವಾಗತಿಸಿದರು. ಶಿಬಿ ಇ. ವಂದಿಸಿದರು.





