HEALTH TIPS

ರಷ್ಯಾದ ಉಪ ಪ್ರಧಾನಿ ಡೆನಿಸ್ ಮಂಟುರೋವ್ ಭೇಟಿಯಾದ ಅಜಿತ್ ಕುಮಾರ್ ದೋವಲ್

ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದಕ್ಕೆ ಭಾರತದ ಮೇಲೆ ಅಮೆರಿಕ ಭಾರಿ ಸುಂಕ ವಿಧಿಸಿದ ಬಳಿಕ ರಷ್ಯಾದ ನಾಯಕರು ಭಾರತೀಯ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಲು ಪ್ರಾರಂಭಿಸಿದ್ದಾರೆ. ಸದ್ಯ ಮಾಸ್ಕೊದಲ್ಲಿರುವ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಕುಮಾರ್ ದೋವಲ್ (Ajit Doval) ಅವರೊಂದಿಗೆ ರಷ್ಯಾದ ಮೊದಲ ಉಪ ಪ್ರಧಾನ ಮಂತ್ರಿ ಡೆನಿಸ್ ಮಂಟುರೋವ್ (Denis Manturov) ಸಭೆ ನಡೆಸಿ ಎರಡೂ ದೇಶಗಳ ನಡುವೆ ರಕ್ಷಣೆ ಮತ್ತು ಕಾರ್ಯತಂತ್ರ ಸಹಕಾರದ ಕುರಿತು ಮಾತುಕತೆ ನಡೆಸಿದ್ದಾರೆ.

ಅಜಿತ್ ದೋವಲ್ ಇದಕ್ಕೂ ಮೊದಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ರಷ್ಯಾದ ಭದ್ರತಾ ಮಂಡಳಿಯ ಕಾರ್ಯದರ್ಶಿ ಸೆರ್ಗೆಯ್ ಶೋಯಿಗು ಅವರೊಂದಿಗೆ ಮಾತುಕತೆ ನಡೆಸಿದ್ದರು. ರಷ್ಯಾದ ರಾಯಭಾರ ಕಚೇರಿ ಶುಕ್ರವಾರ ಹೊರಡಿಸಿದ ಪ್ರಕಟಣೆಯಲ್ಲಿ ರಷ್ಯಾದ ಮೊದಲ ಉಪ ಪ್ರಧಾನ ಮಂತ್ರಿ ಡೆನಿಸ್ ಮಂಟುರೋವ್ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಕುಮಾರ್ ದೋವಲ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಇವರಿಬ್ಬರು ಮಾತುಕತೆಗಳು ಎರಡೂ ರಾಷ್ಟ್ರಗಳ ನಡುವಿನ ರಕ್ಷಣೆ ಮತ್ತು ಕಾರ್ಯತಂತ್ರದ ಸಹಕಾರದ ಮೇಲೆ ಕೇಂದ್ರೀಕೃತವಾಗಿತ್ತು ಎಂದು ಎನ್ನಲಾಗಿದೆ.

ದ್ವಿಪಕ್ಷೀಯ ಮಿಲಿಟರಿ ಮತ್ತು ತಾಂತ್ರಿಕ ಸಹಕಾರದ ಕುರಿತು ಚರ್ಚೆ ನಡೆಸಿರುವ ನಾಯಕರು ನಾಗರಿಕ ವಿಮಾನ ತಯಾರಿಕೆ, ಲೋಹಶಾಸ್ತ್ರ ಮತ್ತು ರಾಸಾಯನಿಕ ಉದ್ಯಮ ಸೇರಿದಂತೆ ಇತರ ಕಾರ್ಯತಂತ್ರದ ವಲಯಗಳಲ್ಲಿನ ಜಂಟಿ ಯೋಜನೆಗಳ ಪ್ರಗತಿಯ ಕುರಿತು ಮಾತುಕತೆ ನಡೆಸಿದರು ಎಂದು ರಾಯಭಾರ ಕಚೇರಿ ತಿಳಿಸಿದೆ.

ಆಗಸ್ಟ್ 8ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಪುಟಿನ್ ದೂರವಾಣಿ ಸಂಭಾಷಣೆ ನಡೆಸಿದ್ದು, ಈ ಸಂದರ್ಭದಲ್ಲಿ ಅವರು ವ್ಯಾಪಾರ, ಆರ್ಥಿಕ ಮತ್ತು ಹೂಡಿಕೆ ಸಹಕಾರದ ಬಗ್ಗೆ ಚರ್ಚೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

ಬಳಿಕ ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿಯನ್ನೂ ನೀಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಉಕ್ರೇನ್‌ನಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದ್ದಕ್ಕಾಗಿ ಅಧ್ಯಕ್ಷ ಪುಟಿನ್ ಅವರಿಗೆ ಧನ್ಯವಾದ ತಿಳಿಸಿದರು.

ʼʼಸ್ನೇಹಿತ, ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಬಹಳ ವಿವರವಾದ ಸಂಭಾಷಣೆ ನಡೆಸಿದೆ. ಉಕ್ರೇನ್‌ನ ಇತ್ತೀಚಿನ ಬೆಳವಣಿಗೆಗಳ ಕುರಿತು ಅವರು ಮಾಹಿತಿ ನೀಡಿದ್ದು, ಅವರಿಗೆ ಧನ್ಯವಾದ ಹೇಳಿದ್ದೇನೆ. ನಮ್ಮ ದ್ವಿಪಕ್ಷೀಯ ಕಾರ್ಯಸೂಚಿಯಲ್ಲಿನ ಪ್ರಗತಿಯನ್ನು ನಾವು ಪರಿಶೀಲಿಸಿದ್ದೇವೆ. ಭಾರತ ಮತ್ತು ರಷ್ಯಾ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸುವ ಯೋಜನೆಯನ್ನು ಹೊಂದಿದೆ. ಈ ವರ್ಷದ ಕೊನೆಯಲ್ಲಿ ಭಾರತಕ್ಕೆ ಆಗಮಿಸಲಿರುವ ಪುಟಿನ್ ಅವರ ಆತಿಥ್ಯ ವಹಿಸಲು ನಾನು ಎದುರು ನೋಡುತ್ತಿದ್ದೇನೆʼʼ ಎಂದು ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries