HEALTH TIPS

ನಿಷೇಧಿತವಲ್ಲದ ಸಂಘಟನೆಯ ಸಭೆಗಳಿಗೆ ಹಾಜರಾಗುವುದು ಯುಎಪಿಎ ಅಡಿ ಅಪರಾಧವಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: 'ಅಲ್-ಹಿಂದ್' ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)ಯಡಿ ಬಂಧಿತ ಸಲೀಂ ಖಾನ್ ಎನ್ನುವವರಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಡಿಎ)ಯು ಸಲ್ಲಿಸಿದ್ದ ಮೇಲ್ಮನವಿಯನ್ನು ಸವೋಚ್ಚ ನ್ಯಾಯಾಲಯವು ಇತ್ತೀಚಿಗೆ ತಿರಸ್ಕರಿಸಿದೆ.

'ಅಲ್-ಹಿಂದ್' ಯುಎಪಿಎ ಪ್ರಕಾರ ನಿಷೇಧಿತ ಸಂಘಟನೆಯಲ್ಲ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡ ನ್ಯಾಯಾಲಯವು,ವ್ಯಕ್ತಿಯೋರ್ವ ಅದರ ಸಭೆಗಳಲ್ಲಿ ಭಾಗಿಯಾಗಿದ್ದರೆ ಅದು ಯುಎಪಿಎ ಅಡಿ ಅಪರಾಧವಾಗುವುದಿಲ್ಲ ಎಂದು ಹೇಳಿತು.

ಆರೋಪಿ ನಂ.11 ಸಲೀಂ ಖಾನ್ ಅವರ ಜಾಮೀನು ಅರ್ಜಿಯನ್ನು ಪರಿಗಣಿಸುವಾಗ ಉಚ್ಚ ನ್ಯಾಯಾಲಯವು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿರುವ ಆರೋಪಗಳು ಯುಎಪಿಎ ಅಡಿ ನಿಷೇಧಿತವಲ್ಲದ 'ಅಲ್-ಹಿಂದ್' ಸಂಘಟನೆಯೊಂದಿಗಿನ ಅವರ ಸಂಪರ್ಕಗಳಿಗೆ ಸಂಬಂಧಿಸಿವೆ ಎನ್ನುವುದನ್ನು ಗಮನಿಸಿದೆ. ಆದ್ದರಿಂದ 'ಅಲ್-ಹಿಂದ್' ಸಭೆಗಳಲ್ಲಿ ಭಾಗಿಯಾಗಿದ್ದು ಯಾವುದೇ ಮೇಲ್ನೋಟದ ಅಪರಾಧಕ್ಕೆ ಕಾರಣವಾಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ವಿಕ್ರಮನಾಥ ಮತ್ತು ಕೆ.ವಿ.ವಿಶ್ವನಾಥನ್ ಅವರ ಪೀಠವು ಹೇಳಿತು.

ಜನವರಿ 2020ರಲ್ಲಿ ಬೆಂಗಳೂರಿನ ಮೈಕೋ ಲೇಔಟ್ ಉಪವಿಭಾಗದ ಸುದ್ದಗುಂಟೆಪಾಳ್ಯ ಪೋಲಿಸ್ ಠಾಣೆಯಲ್ಲಿ 17 ಆರೋಪಿಗಳ ವಿರುದ್ಧ ಐಪಿಸಿ ಮತ್ತು ಯುಎಪಿಎ ಅಡಿ ಪ್ರಕರಣ ದಾಖಲಾಗಿದ್ದು,ಬಳಿಕ ಅದನ್ನು ಎನ್‌ಐಎಗೆ ವರ್ಗಾಯಿಸಲಾಗಿತ್ತು.

ಸಲೀಂ ಖಾನ್‌ಗೆ ಜಾಮೀನು ನೀಡುವಾಗ ಉಚ್ಚ ನ್ಯಾಯಾಲಯವು ಡಾರ್ಕ್ ವೆಬ್ ಮೂಲಕ ಐಸಿಸ್ ನಿರ್ವಾಹಕರ ಜೊತೆ ಸಂಪರ್ಕ ಹೊಂದಿದ್ದ ಆರೋಪವನ್ನು ಎದುರಿಸುತ್ತಿರುವ ಇನ್ನೋರ್ವ ಆರೋಪಿ ಮುಹಮ್ಮದ್ ಝೈದ್‌ಗೆ ಜಾಮೀನು ನಿರಾಕರಿಸಿತ್ತು.

ಸಲೀಂ ಖಾನ್‌ಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯವು, ಯುಎಪಿಎ ಪ್ರಕಾರ ನಿಷೇಧಿತ ಸಂಘಟನೆಯಲ್ಲದ 'ಅಲ್-ಹಿಂದ್‌ನ ಸಭೆಗಳಿಗೆ ಹಾಜರಾಗುವುದು ಮತ್ತು ಸಂಘಟನೆಯ ಸದಸ್ಯರಾಗುವುದು,ತರಬೇತಿ ಸಾಮಗ್ರಿಗಳನ್ನು ಖರೀದಿಸುವುದು ಮತ್ತು ಸಹ-ಸದಸ್ಯರಿಗೆ ಆಶ್ರಯಗಳನ್ನು ಒದಗಿಸುವುದು ಯುಎಪಿಎ ಕಲಂ 2(ಕೆ) ಅಥವಾ ಕಲಂ 2(ಎಂ) ಅಡಿ ಅಪರಾಧ ಎಂದು ಪರಿಗಣಿಸಲಾಗಿಲ್ಲ ಎಂದು ಹೇಳಿತ್ತು.

ಸಲೀಂ ಖಾನ್‌ಗೆ ಜಾಮೀನು ಮಂಜೂರು ಮಾಡಿದ್ದ ಮತ್ತು ಮುಹಮ್ಮದ್ ಝೈದ್‌ಗೆ ಜಾಮೀನು ನಿರಾಕರಿಸಿದ್ದ ಉಚ್ಚ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ ಸರ್ವೋಚ್ಚ ನ್ಯಾಯಾಲಯವು,ಎಲ್ಲ ಸಂಬಂಧಿತ ಅಂಶಗಳನ್ನು ಪರಿಗಣಿಸಿದ ನಂತರವೇ ಅದನ್ನು ಹೊರಡಿಸಲಾಗಿತ್ತು ಎಂದು ಹೇಳಿತು.

ಆರೋಪಿಗಳನ್ನು ವಿಚಾರಣಾಧೀನ ಕೈದಿಗಳಾಗಿ ಸುದೀರ್ಘ ಕಾಲ ಜೈಲಿನಲ್ಲಿ ಕೊಳೆಯುವಂತೆ ಮಾಡುವಂತಿಲ್ಲ ಎಂದು ಬೆಟ್ಟು ಮಾಡಿದ ಸರ್ವೋಚ್ಚ ನ್ಯಾಯಾಲಯವು, ವಿಚಾರಣೆಯನ್ನು ಪೂರ್ಣಗೊಳಿಸಲು ಎರಡು ವರ್ಷಗಳ ಗಡುವನ್ನು ವಿಧಿಸಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries