ಕಾಸರಗೋಡು: ನಗರಸಭಾ ಅಧೀನದಲ್ಲಿರುವ ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳಿಂದ ಖಾಸಗಿ ಬಸ್‍ಗಳ ಸುಗಮ ಸಂಚಾರ ಹಾಗೂ ಪಾರ್ಕಿಂಗ್‍ಗೆ ಅಡಚಣೆಯುಂಟಾಗುತ್ತಿರುವುದಲ್ಲದೆ, ಪ್ರಯಾಣಿಕರು ಹಾಗೂ ಸಾರ್ವಜನಿಕರಲ್ಲಿ ಪ್ರಾಣ ಭೀತಿಯೂ ಎದುರಾಗಿದೆ.
ಕಾಸರಗೋಡು-ಮಂಗಳೂರು, ಕಾಸರಗೋಡು-ಪುತ್ತೂರು, ಕಾಸರಗೋಡು ಕಣ್ಣೂರು, ಕಾಸರಗೋಡು-ಸುಳ್ಯ ಸೇರಿದಂತೆ ನಾನಾ ಕಡೆ ಸಂಚರಿಸುವ ಅಂತಾರಾಜ್ಯ ಸಂಪರ್ಕದ ಖಾಸಗಿ ಹಾಗೂ ಕೆಎಸ್ಸಾರ್ಟಿಸಿ ಬಸ್‍ಗಳು, ಸ್ಥಳೀಯವಾಗಿ ಸಂಚರಿಸುವ ಇತರ ಖಾಸಗಿ ಬಸ್‍ಗಳೂ ಸೇರಿದಂತೆ ನೂರಕ್ಕೂ ಮಿಕ್ಕಿ ಬಸ್‍ಗಳು ಸರ್ವೀಸ್ ನಡೆಸುತ್ತಿರುವ ಹೊಸ ಬಸ್ ನಿಲ್ದಾಣ ವಠಾರ ಇಂದು ಇತರ ಕಟ್ಟಡಗಳ ನಿರ್ಮಾಣದಿಂದ ಸ್ಥಳಾವಕಾಶದ ಕೊರತೆ ಎದುರಾಗಿದೆ.ಬೆಳೆಯುತ್ತಿರುವ ಪೇಟೆಗೆ ಸುಸಜ್ಜಿತ ಬಸ್ ನಿಲ್ದಾಣದ ಕನಸು ನನಸಾಗಿದ್ದರೂ, ಇದರ ವಠಾರದಲ್ಲಿರುವ ಜಾಗವನ್ನು ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕಾಗಿ ಬಳಸುತ್ತಿರುವ ಬಗ್ಗೆ ವ್ಯಾಪಕ ಅಸಮಧಾನ ವ್ಯಕ್ತವಾಗುತ್ತಿದೆ. ಬಸ್ ನಿಲ್ದಾಣದ ಸನಿಹವೇ ವ್ಯಾಪಕವಾಗಿ ಕಟ್ಟಡಗಳು ತಲೆಯೆತ್ತುತ್ತಿದ್ದು, ಇದರಿಂದ ಜಾಗ ಇಕ್ಕಟ್ಟಾಗಿ ಪಾದಚಾರಿಗಳು, ಪ್ರಯಾಣಿಕರು ಪ್ರಾಣ ಭೀತಿಯಿಂದ ಸಂಚರಿಸಬೇಕಾಗುತ್ತಿದೆ.
ಕೆಲವು ವರ್ಷಗಳ ಹಿಂದೆ ಹಳೇ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನಿಳಿಸುವ ಖಾಸಗಿ ಬಸ್‍ಗಳು ತಮ್ಮ ಮುಂದಿನ ಸಂಚಾರಕ್ಕೆ ಕಾಲಾವಕಾಶವಿದ್ದಲ್ಲಿ, ಎಲ್ಲೆಂದರಲ್ಲಿ ರಸ್ತೆಬದಿ ನಿಲ್ಲಿಸಬೇಕಾಗುತ್ತಿದ್ದ ಸಮಸ್ಯೆ ಹೊಸ ಬಸ್ ನಿಲ್ದಾಣ ನಿರ್ಮಾಣದ ನಂತರ ದೂರಾಗಿತ್ತು. ಆದರೆ ಇಂದು ಖಾಸಗಿ ಬಸ್ ನಿಲ್ದಾಣದ ಜಾಗವನ್ನು ಕಟ್ಟಡಗಳ ನಿರ್ಮಾಣಕ್ಕಾಗಿ ಬಳಸಿಕೊಳ್ಳುತ್ತಿರುವುದರಿಂದ ಭಾರೀ ಸಮಸ್ಯೆ ಎದುರಾಗುತ್ತಿದೆ. ಒಂದೆಡೆ ಮಹಿಳಾ ವಿಶ್ರಾಂತಿ ಕೇಂದ್ರ, ಇನ್ನೊಂದೆಡೆ ಬೀದಿ ಬದಿ ವ್ಯಾಪಾರಿಗಳಿಗೆ ವಾಣಿಜ್ಯ ಸಂಕೀರ್ಣ, ಮತ್ತೊಂದು ಪಾಶ್ರ್ವದಲ್ಲಿ ಹೋಟೆಲ್ ಸೇರಿವಂತ ವ್ಯಾಪಾರಿ ಮಳಿಗೆ ಸ್ಥಾಪಿಸಲಾಗಿದ್ದು, ಬಸ್ ನಿಲ್ದಾಣದ ಜಾಗವನ್ನು ಅತಿಕ್ರಮಿಸಿಕೊಂಡು ಹಲವು ಕಟ್ಟಡಗಳು ತಲೆಯೆತ್ತಿದೆ.
ಬಸ್ ಮಾಲಿಕರ ಸಂಘದಿಂದ ಪ್ರತಿಭಟನೆ:
ಹೊಸ ಬಸ್ ನಿಲ್ದಾಣದಲ್ಲಿ ವಠಾರದಲ್ಲಿ ನಿರ್ಮಿಸುತ್ತಿದ್ದ 28 ಸ್ಟಾಲ್‍ಗಳಿಗೆ ಸಂಬಂಧಿಸಿದ ವಿವಾದಕ್ಕೆ ಸಂಬಂಧಿಸಿ ಬಸ್ ಆಪರೇಟರ್ಸ್ ಫೆಡರೇಶನ್ ಕಾಸರಗೋಡು ತಾಲ್ಲೂಕು ಸಮಿತಿ 2022ರಲ್ಲೇ ತನ್ನ ವಿರೋಧ ವ್ಯಕ್ತಪಡಿಸಿದತ್ತು. ಫೆಡರರೇಶನ್ ಮತ್ತು ನಗರಸಭಾ ಆಡಳಿತದ ನಡುವೆ 2022 ಜೂನ್ 22ರಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಸಿ, ಹೊಸ ಕಟ್ಟಡ ನಿರ್ಮಿಸದಿರುವ ಬಗ್ಗೆ ನಗರಸಭಾ ಆಡಳಿತ ಲಿಖಿತ ಭರವಸೆ ನೀಡಿದ್ದರೂ, ಇದ್ಯಾವುದೂ ಪಾಲನೆಯಾಗಿಲ್ಲ. ಪ್ರಯಾಣಿಕರ ಸುರಕ್ಷತೆಗಾಗಿ ಬಸ್ ನಿಲ್ದಾಣ ಸುತ್ತು ಆವರಣಬೇಲಿ ನಿರ್ಮಿಸುವ ಭರವಸೆಯನ್ನೂ ಈಡೇರಿಸಿಲ್ಲ. ಕಾಸರಗೋಡು ಬಸ್ ನಿಲ್ದಾಣದ ಬಗ್ಗೆ ತೋರುವ ನಿರ್ಲಕ್ಷ್ಯ ಧೋರಣೆ ವಿರುದ್ಧ ಆ. 25ರಂದು ಫೆಡರೇಶನ್ ವತಿಯಿಂದ ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ಪ್ರತಿಭಟನಾ ಧರಣಿ ನಡೆಸಲು ತೀರ್ಮಾನಿಸಿದೆ.
ಅಭಿಮತ:
ಇಳಿದೆಲ್ಲಾ ಕಡೆ ಖಾಸಗಿ ಬಸ್ ನಿಲ್ದಾಣಗಳನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಯೋಜನೆ ತಯಾರಿಸುತ್ತಿದ್ದರೆ, ಕಾಸರಗೋಡಿನಲ್ಲಿ ಖಾಸಗಿ ಬಸ್ ನಿಲ್ದಾಣದ ಜಾಗವನ್ನು ಕಬಳಿಸಿ, ವ್ಯಾಪಕವಾಗಿ ಕಟ್ಟಡಗಳನ್ನು ನಿರ್ಮಿಸುವ ಮೂಲಕ ನಗರಸಭೆ ಇಲ್ಲಿನ ವ್ಯವಸ್ಥೆ ಹಾಳುಗೆಡಹುತ್ತಿರುವುದು ಖಂಡನೀಯ. ಖಾಸಗಿ ಬಸ್ ನಿಲ್ದಾಣ ಪ್ರದೇಶವನ್ನು ವ್ಯಾಪಾರಿ ವಲಯವನ್ನಾಗಿ ಬದಲಾಯಿಸುವ ಕ್ರಮಕ್ಕೆ ಖಾಸಗಿ ಬಸ್ ಮಾಲಿಕರ ಸಂಘಟನೆ ಆಸ್ಪದ ನೀಡದು. ಈ ಬಗ್ಗೆ ಪ್ರಬಲ ಹೋರಾಟ ನಡೆಸಲಾಗುವುದು.
ಕೆ. ಗಿರೀಶ್, ಅಧ್ಯಕ್ಷರು
ಜಿಲ್ಲಾ ಖಾಸಗಿ ಬಸ್ ಮಾಲಿಕರ ಸಂಘಟನೆ, ಕಾಸರಗೋಡು






