ಉಪ್ಪಳ: ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ 22ನೇ ಚಾತುರ್ಮಾಸ್ಯ ಶುಭ ಸಂದರ್ಭದಲ್ಲಿ ಭಾನುವಾರ ಕೊಂಡೆವೂರು ಮಠದಲ್ಲಿ ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ ಸಹಿತ ಶ್ರೀ ವಿಷ್ಣುಸಹಸ್ರನಾಮ ಹವನ ವೇದಮೂರ್ತಿ ಶ್ರೀಹರಿನಾರಾಯಣ ಮಯ್ಯರ ಪೌರೋಹಿತ್ಯದಲ್ಲಿ ನಡೆಯಿತು. ವಿವಿಧೆಡೆಗಳಿಂದ ಭಕ್ತಾದಿಗಳು ತಂಡವಾಗಿ ಬಂದು ಶ್ರೀ ವಿಷ್ಣುಸಹಸ್ರನಾಮ ಪಾರಾಯಣ ನಡೆಸಿದರು. ಈ ಸಂದರ್ಭ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಬೆಂಗಳೂರಿನ ರಾಜ್ಯಸಭಾ ಸದಸ್ಯ ಕೆ. ನಾರಾಯಣ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಪೂಜ್ಯರು ಆಶೀರ್ವಚನಗೈದು, ಸಮಸ್ತ ಭಕ್ತಾದಿಗಳ ಬೆಂಬಲದಿಂದ ಆಶ್ರಮದ ಚಟುವಟಿಕೆ ಉತ್ತಮವಾಗಿ ನಡೆಯುತ್ತಿದೆ. ಆಶ್ರಮದ ಬೆಳವಣಿಗೆಯಲ್ಲಿ ಎಲ್ಲೆಡೆಯ ಭಕ್ತರ ಕೊಡುಗೆ ಅಪಾರ. ದೇಹದ ನಾಡಿಗಳ ಬೆಳವಣಿಗೆಯಲ್ಲಿ, ತಮ್ಮೂಲಕ ಆರೋಗ್ಯದ ವೃದ್ಧಿಯಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಪ್ರಮುಖ ಪಾತ್ರ ವಹಿಸುವುದರಿಂದ ಪ್ರತಿಯೋರ್ವರು ಪಾರಾಯಣ ಮಾಡೋಣ ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹೈದರಾಬಾದಿನ ಖ್ಯಾತ ಜ್ಯೋತಿಷಿ ಬ್ರಹ್ಮಶ್ರೀ ಟಿ.ಎಸ್ ವಿನೀತ್ ಭಟ್, ಬೆಂಗಳೂರಿನ ಸಮಾಜ ಸೇವಕ ಬಿ.ಟಿ. ರಾಮಚಂದ್ರಪ್ಪ, ತಿರುವನಂತಪುರಂನ ಉದ್ಯಮಿ ರಾಜೇಶ್ ಪಡಿಞಟಿಲ್, ವಿಶ್ವಹಿಂದೂ ಪರಿಶತ್ತಿನ ದಕ್ಷಿಣ ಪ್ರಾಂತ ಸೇವಾ ಪ್ರಮುಖ ಪ್ರೇಮಾನಂದ ಶೆಟ್ಟಿ ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡರು. ಆಶ್ರಮದ ವಿಶ್ವಸ್ಥ ವಿಶ್ವನಾಥ ವೆಂಗೆರೆ, ಪಿ.ಆರ್ ಶೆಟ್ಟಿ ಕುಳೂರು ಮತ್ತು ಬೆಂಗಳೂರಿನ ಬಾಲಕೃಷ್ಣ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಗೋಪಾಲ ಭಟ್ ಸಿ.ಎಚ್ ಅವರು ಬರೆದ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಕಿರು ಪರಿಚಯ ಪುಸ್ತಕವನ್ನು ಶ್ರೀಗಳು ಬಿಡುಗಡೆಗೊಳಿಸಿದರು. ಕು. ಗಾಯತ್ರೀ ಕೊಂಡೆವೂರು ಪ್ರಾರ್ಥನೆ ಹಾಡಿದರು. ಡಾ. ಜಯಪ್ರಕಾಶ್‍ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ, ದಿನಕರ ಹೊಸಂಗಡಿ ಮತ್ತು ಕೆ.ಎಂ ಗಂಗಾಧರ್ ಕೊಂಡೆವೂರು ನಿರೂಪಿಸಿದರು.
ಆ.21 ರ ಸೂರ್ಯಾಸ್ತದಿಂದ 23 ಸೂರ್ಯಾಸ್ತದ ತನಕ 48 ಗಂಟೆಗಳ ಅಖಂಡ ಭಜನಾ ಕಾರ್ಯಕ್ರಮದಲ್ಲಿ 32 ತಂಡಗಳು ಭಜನಾಸೇವೆ ಭಾಗವಹಿಸಿದ್ದವು.




.jpeg)
.jpeg)
.jpeg)
