ಕಾಸರಗೋಡು: ಬುಡಕಟ್ಟು ಸಮುದಾಯದ ಕಲಾ ಪ್ರಕಾರಗಳನ್ನು ಹೊಸ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಚುರುಕುಗೊಳಿಸಲಾಗುವುದು ಎಂದು ಸ್ಥಳೀಯಾಡಳಿತ, ಅಬಕಾರಿ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಂ.ಬಿ. ರಾಜೇಶ್ ಹೇಳಿದರು.
ಅವರು ಅಂತಾರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ದಿನಾಚರಣೆಯ ಅಂಗವಾಗಿ ಕಾಸರಗೋಡಿನ ಕುತ್ತಿಕ್ಕೋಲ್ ಪಂಚಾಯಿತಿಯ ಸೋಪಾನಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 'ಜನ್ ಗಲ್ಸಾ' ಯೋಜನೆಯ ರಾಜ್ಯಮಟ್ಟದ ಉದ್ಘಾಟನೆ ಮತ್ತು ಆನಿಮೇಟರ್‍ಗಳು ಮತ್ತು ಬ್ರಿಡ್ಜ್ ಕೋರ್ಸ್ ಮಾರ್ಗದರ್ಶಕರ ಪ್ರಾದೇಶಿಕ ಸಭೆಯನ್ನು ಆನ್‍ಲೈನ್ ಮೂಲಕ ನೆರವೇರಿಸಿ ಮಾತನಾಡಿದರು. ಸ್ಥಳೀಯ ಜನರು ಸಮಗ್ರ ಪ್ರಗತಿಯ ಗುರಿಯೊಂದಿಗೆ 2009 ರಿಂದ ಕುಟುಂಬಶ್ರೀ ನಡೆಸುತ್ತಿರುವ ಚಟುವಟಿಕೆಗಳು ಸಮಾಜಕ್ಕೆ ಆದರ್ಶಪ್ರಾಯವಾದುದು. ಕುಟುಖಬಶ್ರೀಯಿಂದ ಸ್ಥಳೀಯ ಜನರ ಜೀವನದ ಮಟ್ಟ ಗಣನೀಯವಾಗಿ ಸುಧಾರಣೆ ಕಂಡಿದೆ. ಪ್ರಸಕ್ತ ಸ್ಥಳೀಯ ಸಮುದಾಯದ ಶೇ.98 ರಷ್ಟು ಕುಟುಂಬಗಳು ಕುಟುಂಬಶ್ರೀ ನೆರೆಹೊರೆ ಗುಂಪುಗಳಲ್ಲಿವೆ. 7135 ವಿಶೇಷ ನೆರೆಹೊರೆ ಗುಂಪುಗಳು ಮತ್ತು ಸಾಮಾನ್ಯ ನೆರೆಹೊರೆ ಗುಂಪುಗಳ ಮೂಲಕ ಒಟ್ಟು 1,24,904 ಕುಟುಂಬಗಳನ್ನು ಕುಟುಂಬಶ್ರೀಯಲ್ಲಿ ಸೇರಿಸಲಾಗಿದ್ದು, 2893 ಯುವಕರಿಗೆ ಪಿಎಸ್‍ಸಿ ತರಬೇತಿ ನೀಡಲಾಗಿದೆ. ಇವರಲ್ಲಿ 193 ಜನರಿಗೆ ಸರ್ಕಾರಿ ಮತ್ತು ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗ ಸಿಕ್ಕಿದೆ ಎಂದು ತಿಳಿಸಿದರು. ಕುಟುಂಬಶ್ರೀ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ದಿನೇಶ್ ಐಎಎಸ್ ಸಮಾರಂಭದಲ್ಲಿ ದೀಪ ಬೆಳಗಿಸಿದರು.
ಕುತ್ತಿಕೋಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುರಳಿ ಪಯ್ಯಂಗಾನಂ, ಬೇಡಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಧನ್ಯಾ, ಕಾರಡ್ಕ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ರಮಣಿ, ಕುತ್ತಿಕೋಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕೆ.ಶೋಭನ ಕುಮಾರಿ, ಕಾರಡ್ಕ ಬ್ಲಾಕ್ ಪಂಚಾಯಿತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಪಿ.ಸವಿತಾ, ಸಿಡಿಎಸ್ ಅಧ್ಯಕ್ಷರು, ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಅಂಚಲ್ ಕೃಷ್ಣಕುಮಾರ್, ಕಾಸರಗೋಡು ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂದನನ್, ಮಲಪ್ಪುರಂ ಮತ್ತು ಕಣ್ಣೂರು ಜಿಲ್ಲಾ ಮಿಷನ್ ಸಂಯೋಜಕರಾದ ಬಿ.ಸುರೇಶ್ ಕುಮಾರ್, ಎಂ.ವಿ.ಜಯನ್, ಕಾಸರಗೋಡು ಜಿಲ್ಲಾ ಮಿಷನ್ ಸಹಾಯಕ ಕಾರ್ಯಕ್ರಮ ಸಂಯೋಜಕರಾದ ಸಿ.ಎಚ್. ಇಕ್ಬಾಲ್, ಸಿ.ಎಂ. ಸೌದಾ ಮತ್ತು ಡಿ. ಹರಿದಾಸ್ ಭಾಗವಹಿಸಿದ್ದರು. ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಕೆ. ರತೀಶ್ ಕುಮಾರ್ ಸ್ವಾಗತಿಸಿದರು. ಸಹಾಯಕ ಸಂಯೋಜಕ ಕಿಶೋರ್ ಕುಮಾರ್ ಎಂ. ವಂದಿಸಿದರು.
ಕುತ್ತಿಕೋಲ್ ಮತ್ತು ಬೇಡಡ್ಕ ಪಂಚಾಯಿತಿಯ ಸಿಡಿಎಸ್ ಕಾರ್ಯಕರ್ತರು ಕುಟುಂಬಶ್ರೀ ಮುದ್ರಾ ಗೀತೆಯ ನೃತ್ಯ ಪ್ರಸ್ತುತಪಡಿಸಿದರು. ಮಲಪ್ಪುರಂ, ವಯನಾಡ್, ಕಾಸರಗೋಡು, ಕಣ್ಣೂರು ಮತ್ತು ಕೋಯಿಕ್ಕೋಡ್ ಜಿಲ್ಲೆಗಳ ಪರಿಶಿಷ್ಟ ಪಂಗಡದ ಅನಿಮೇಟರ್‍ಗಳು ಮತ್ತು ಬ್ರಿಡ್ಜ್ ಕೋರ್ಸ್ ಮಾರ್ಗದರ್ಶಕರು ಸೇರಿದಂತೆ ನಲ್ನೂರಕ್ಕೂ ಹೆಚ್ಚು ಜನರು ಪ್ರಾದೇಶಿಕ ಸಭೆಯಲ್ಲಿ ಭಾಗವಹಿಸಿದ್ದರು.





